ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆರ್.ಎಸ್.ಎಸ್ ಮುಖಂಡನ ಕಾರಿನ ಮೇಲೆ ಕಿಲ್ ಯು ಜಿಹಾದ್ ಎಂದು ಬರೆದು, ಅಶ್ಲೀಲ ಪದಗಳನ್ನು ಬಳಸಿ ಕಾರಿನ ನಾಲ್ಕು ಚಕ್ರಗಳ ಗಾಳಿ ತೆಗೆದು ಕಾರನ್ನು ಸ್ಕ್ರಾಚ್ ಮಾಡಿ ವಿಕೃತಿ ಮೆರೆದು ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಲಕ್ಷ್ಮೀಶ ನಗರದಲ್ಲಿ ಈ ಘಟನೆ ನಡೆದಿದ್ದು, ಮನೆಯ ಮುಂಭಾಗ ನಿಲ್ಲಿಸಿದ್ದ ನೀಲಿ ಬಣ್ಣದ ರೆನಾಲ್ಟ್ ಕ್ವಿಡ್ ಕ್ಲೈಂಬರ್ ಕಾರ್ ಹಾನಿಗೀಡಾಗಿದೆ. ರಾಷ್ಟೀಯ ಸ್ವಯಂ ಸೇವಕ ಸಂಘದ ಧರ್ಮ ಜಾಗರಣ ಗತಿವಿಧಿಯ ಕಾರ್ಯಕರ್ತ ಡಾ. ಶಶಿಧರ್ ಚಿಂದಿಗೆರೆ ಜಯಣ್ಣ ಅವರ ಕಾರಿಗೆ ಹಾನಿಯಾಗಿದ್ದು, ಕಾರಿನ ಮೇಲೆ ಕಿಲ್ ಯು, ಜಿಹಾದ್ ಸೇರಿದಂತೆ ಅಶ್ಲೀಲ ಪದಗಳನ್ನು ಬರೆದು ಕೊಲೆಯ ಬೆದರಿಕೆ ಹಾಕಲಾಗಿದೆ. 

ಇದನ್ನೂ ಓದಿ: ಮನೆ ಮುಂದಿದ್ದ ತೊಟ್ಟಿಗೆ ಬಿದ್ದು 11 ತಿಂಗಳ ಮಗುವಿನ ದುರ್ಮರಣ


ಘಟನಾ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. 

ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ. ಘಟನಾ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು, ಕ್ಷಿಪ್ರಗತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿಕಟ್ಟಬೇಕಿದೆ.

ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದಿನೇದಿನೇ ಹಲ್ಲೆ, ಕೊಲೆಗಳಂತಹ ಘಟನೆಗಳು ಯತ್ನಗಳು ನಡೆಯುತ್ತಿದ್ದು ಈ ಕುರಿತು ಕ್ರಮವಾಗಬೇಕು ಎಂಬ ಬಲವಾದ ಒತ್ತಡ ಸಾರ್ವಜನಿಕರಿಂದ,  ಹಿಂದೂ ಸಂಘಟನೆಗಳ ಮುಖಂಡರಿಂದ ವ್ಯಕ್ತವಾಗಿದೆ.

ಮನೆ ಮುಂದಿದ್ದ ತೊಟ್ಟಿಗೆ ಬಿದ್ದು 11 ತಿಂಗಳ ಮಗುವಿನ ದುರ್ಮರಣ :

ಶಿವಮೊಗ್ಗ: ಹನ್ನೊಂದು ತಿಂಗಳ ಮಗು ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ಮಗನಾದ ಅಕ್ಷಯ್ (11 ತಿಂಗಳು ) ಮನೆಯ ಮುಂದಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿರುವ ಹಸುಗೂಸು.



ಮುಂದಿನ ವಾರ ಮಗುವಿನ ಪ್ರಥಮ ವರ್ಷದ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಕುಟುಂಬವರ್ಗದವರು ಯೋಚಿಸಿದರು ಆದರೆ ವಿಧಿಯ ಆಟ ಎಂಬಂತೆ ಮಗುವಿನ ಸಾವಿನಿಂದ ಮನೆಯಲ್ಲೀಗ ಸಂಭ್ರಮ ಬದಲಾಗಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಈ ದುರಂತದಿಂದಾಗಿ ಊರಿನಲ್ಲಿ ಸ್ಮಶಾನ ಮೌನ ಆವರಿಸಿದ್ದು ನಿನ್ನೆ ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಾಹನ ತೊಳೆಯಲು ಪೂಜೆ ಪುನಸ್ಕಾರದ ಕಡೆ ಗಮನ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಅಂಬೆಗಾಲು ಇಡುತ್ತಾ ಒಡಾಡುತ್ತಿದ್ದ ಮಗು ತನಗರಿವಿಲ್ಲದಂತೆ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ. ಸ್ವಲ್ಪ ಹೊತ್ತಿನ ನಂತರ ಮಗುವಿನ ತಾತ ವಾಹನ ತೊಳೆಯಲು ತೊಟ್ಟಿಯಲ್ಲಿ ಬಗ್ಗಿದಾಗ ಮಗುವನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. 

ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಮಗುವಿನ ಆರೋಗ್ಯದಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ. ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯಾಧಿಕಾರಿಗಳ ತಂಡ ಮಗುವಿನ ಕಳೆಬರಹವನ್ನು ಪೋಷಕರಿಗೆ ನೀಡುವಾಗ ಅಲ್ಲಿ ಸೇರಿದ್ದ ಜನಸ್ತೋಮ ಹಾಗೂ ಕುಟುಂಬಸ್ಥರ ಆಕ್ರಂದನ ನೆರೆದಿದ್ದ ಜನರ ಹೃದಯ ಹಿಂಡುತ್ತಿತ್ತು.

ಮೃತ ಮಗುವಿನ ಮೂರು ವರ್ಷದ ಅಕ್ಕ ನಕ್ಷತ್ರ ಹಾಗೂ ತಂದೆ ತಾಯಿಯ ದುಃಖ ಹೇಳತೀರದಾಗಿತ್ತು. 

ನಿನ್ನೆ ಸಂಜೆಯೇ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ವಿಧಿಗೆ ಹಿಡಿಶಾಪ ಹಾಕುತ್ತಾ ಊರಿನ ಗ್ರಾಮಸ್ಥರೂ ಭಾಗಿಯಾಗಿ ಆ ಪುಟ್ಟ ಮಗುವಿನ ಶವ ಸಂಸ್ಕಾರ ನಡೆಸಿದರು. ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.