ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗದ ಶಿರೂರು ಕೆರೆ ಸೇತುವೆ ಮೇಲೆ KSRTC ಬಸ್ ಮತ್ತು ಮಾರುತಿ ಓಮಿನಿ ನಡುವೆ ಮುಖಾಮುಖಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಸಂಭವಿಸಿದೆ. 

ಇದನ್ನೂ ಓದಿ: ಅನಧಿಕೃತ ‘ಪ್ರೆಸ್’ ಬೋರ್ಡ್ ಹಾಕಿಕೊಂಡಿರುವುದು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ; ಶಿವಕಾಶಿ

ಜೈನ ಧರ್ಮೀಯರ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀಕ್ಷೇತ್ರ ವಡನ್‌ಬೈಲ್ ಧರ್ಮದರ್ಶಿ ಎಚ್.ಎಂ.ವೀರರಾಜ ಜೈನ್ ಮತ್ತು ಅವರ ಸಹೋದರ ಎಚ್.ಎಂ. ದೇವಯ್ಯ ಅವರು ಕಾರ್ಗಲ್‌ನ ಸಹಕಾರಿ ಸಂಸ್ಥೆಯೊಂದರ ಸರ್ವಸದಸ್ಯರ ಸಭೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಅಪಘಾತದ ತೀವ್ರತೆಗೆ ದೇವಯ್ಯ (70) ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ವೀರರಾಜ ಜೈನ್ ಅವರ ಕಾಲು ಮುರಿತಕ್ಕೊಳಗಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಅಪಘಾತದಲ್ಲಿ ಓಮಿನಿ ಕಾರು ಸಂಪೂರ್ಣ ನುಜುಗುಜ್ಜಾಗಿದ್ದು, ಸ್ಥಳೀಯರು ಹಾಗೂ ಇತರೆ ವಾಹನಗಳ ಸವಾರರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕಾರ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.