ಚಿಕ್ಕಮಗಳೂರು:
ಶಾಸಕ MP ಕುಮಾರಸ್ವಾಮಿ ಗೆ ಜಾಮೀನು ರಹಿತ ವಾರೆಂಟ್ ಜಾರಿ:
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನುರಹಿತ ವಾರೆಂಟ್ ಜಾರಿಮಾಡಿ ಕೋರ್ಟ್ ಆದೇಶಿಸಿದೆ. 42ನೇ ACMM ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದು, ಮುಂದಿನ ತಿಂಗಳು 10ನೇ ತಾರೀಕು ಹಾಜರಾಗಲು ಆದೇಶಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣದ ಆರೋಪಿಯಾಗಿರುವ MLA ಕುಮಾರಸ್ವಾಮಿ ಅವರ ಹೇಳಿಕೆ ದಾಖಲಿಸಲು ಈಗಾಗಲೇ ನೊಟೀಸ್ ನೀಡಲಾಗಿತ್ತು. ಪ್ರಕರಣದ ವಿಚಾರಣೆಗೆ ರಿಲೀಫ್ ಕೋರಿ ಕುಮಾರಸ್ವಾಮಿ ಅರ್ಜಿ ಸಲ್ಲಿಸಿದ್ದರು. ಅನಾರೋಗ್ಯದ ಕಾರಣ ನೀಡಿ, ಸಿಆರ್‌ಪಿಸಿ 317 ರ ಅಡಿ ವೈದ್ಯಕೀಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅರ್ಜಿದಾರ ಹೂವಪ್ಪ ಗೌಡ ದಾಖಲೆ ಸಮೇತ ಆಕ್ಷೇಪಣೆ ಸಲ್ಲಿಸಿದ್ದರು. ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಎಂದು ದಿನಪತ್ರಿಕೆ ವರದಿಗಳು ಪೋಟೋಗಳ ಸಹಿತವಾಗಿ ಕೋರ್ಟ್ ಗೆ ದಾಖಲೆ ಸಲ್ಲಿಸಲಾಗಿತ್ತು. ಶಾಸಕ ಕುಮಾರಸ್ವಾಮಿ ಅನಾರೋಗ್ಯದ ನೆಪವೊಡ್ಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಕೋರ್ಟ್, ಕುಮಾರಸ್ವಾಮಿ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿ ಆದೇಶಿಸಿದೆ.
ಚಿಕ್ಕಮಗಳೂರು - ಬೇಲೂರು ರಾಜ್ಯ ಹೆದ್ದಾರಿ ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿ.
ಚಿಕ್ಕಮಗಳೂರಿನ ಎಐಟಿ ಸರ್ಕಲ್ ನಿಂದ ಬೇಲೂರು - ಹಾಸನ - ಹೊಳೆನರಸೀಪುರ- ಬಿಳಿಕೆರೆ ರಸ್ತೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 373 ಕ್ಕೆ ಮೇಲ್ದರ್ಜೆಗೇರಿಸಲಾಗಿದೆ
ಕಾಂಗ್ರೆಸ್ ನಿಂದ ಪೇ ಸಿಎಂ ಪೋಸ್ಟರ್ ಅಭಿಯಾನ; C.T ರವಿ ಟಾಂಗ್
ಕಾಂಗ್ರೆಸ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ. ಕೆಲವು ಸರಿ ಕಾಂಗ್ರೆಸ್ ನ್ನು ಬೇರು ಸಹಿತ ಕಿತ್ತು ಹಾಕಬೇಕು ಅಂತ ವೇದಿಕೆಗಳಲ್ಲಿ ಯಾರು ಹೇಳಿದ್ದು? ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೆ ಹೇಳಿದ್ದು ನಾನಲ್ಲ ಎಂದು ಕುಟುಕಿದರು. ನರೇಂದ್ರ ಮೋದಿ ಕೈ ಬಲ ಪಡಿಸಬೇಕು ಎಂಬುದಾಗಿಯೂ ಅವರೇ ವೇದಿಕೆಗಳಲ್ಲಿ ಹೇಳಿದ್ದಾರೆ. ಪೇ ಫಾರ್ ಕಾಂಗ್ರೆಸ್ ಮೇಡಂ, ಅದನ್ನು ಫೇ ಫಾರ್ ಸಿಎಂ ಅಂತಾ ಹಾಕಿದ್ದಾರೆ, ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅವ್ರ ಹೈಕಮಾಂಡ್ ಗೆ ಕಪ್ಪ ಕೊಡುವಂತದ್ದನ್ನ ಎಟಿಎಂ ಆಗಿ ಕರ್ನಾಟಕ ಮಾಡಿಕೊಂಡಿದ್ರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಕ್ಷಿತಾ ಕುಟುಂಬಕ್ಕೆ ಎಂಟು ಲಕ್ಷ ಪರಿಹಾರ ಘೋಷಣೆ:
ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡ್ಯಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಕುಟುಂಬಕ್ಕೆ ರಾಜ್ಯಸರ್ಕಾರ ಎಂಟು ಲಕ್ಷ ರೂಪಾಯಿ ಹಣದ ಪರಿಹಾರವನ್ನು ಘೋಷಣೆ ಮಾಡಿದೆ. ಚಿಕ್ಕಮಗಳೂರು ನಗರದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ನಡೆಸುತ್ತಿದ್ದ 18 ವರ್ಷದ ಯುವತಿ, ಸರ್ಕಾರಿ ಬಸ್ಸಿನಿಂದ ಇಳಿಯುವಾಗ ಆಯ ತಪ್ಪಿಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 18 ವರ್ಷದ ರಕ್ಷಿತಾ ಪೋಷಕರು ಆಕೆಯ ಸಾವಿನ ನೋವಿನಲ್ಲೂ ಎಲ್ಲಾ ಅಂಗಾಂಗಗಳನ್ನ ದಾನ ಮಾಡಿದ್ದರು. ಆಕೆಯ ಒಂಬತ್ತು ಅಂಗಾಂಗಳಿಂದ 9 ಜನರ ಜೀವ ಉಳಿದಿದೆ. ಸರ್ಕಾರ ಆಕೆಯ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ಗೌರವಯುತವಾಗಿ ಎಂಟು ಲಕ್ಷ ಹಣವನ್ನು ಸರ್ಕಾರ ನೀಡಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಐದು ಲಕ್ಷ. ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ಹಣವನ್ನು ಸರ್ಕಾರ ಮಂಜೂರು ಮಾಡಿದೆ. ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡುಚಿ ಶಾಸಕ ಪಿ.ರಾಜೀವ್ ಕಡೂರಿನ ಸೋಮನಹಳ್ಳಿ ತಾಂಡ್ಯಾದ ರಕ್ಷಿತಾ ಮನೆಗೆ ಭೇಟಿ ನೀಡಿ ತಾಂಡ್ಯ ಅಭಿವೃದ್ಧಿ ನಿಗಮದ ಒಂದು ಲಕ್ಷ ಹಾಗೂ ಉದ್ಯಮಶೀಲತೆ ಯೋಜನೆಯಡಿಯ 2 ಲಕ್ಷ ಒಟ್ಟು ಮೂರು ಲಕ್ಷ ಹಣದ ಚೆಕ್ ನೀಡಲಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮುಖ್ಯಮಂತ್ರಿ ಪರಿಹಾರ ನಿಧಿಯ 5 ಲಕ್ಷದ ಚೆಕ್ ನೀಡಲಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗ:
ಶಂಕಿತ ಉಗ್ರನನ್ನು ತಂದೆಯ ಅಂತಿಮ ದರ್ಶನಕ್ಕೆ ಬಿಗಿ ಭದ್ರತೆಯಲ್ಲಿ ಕರೆದೊಯ್ದ ಪೊಲೀಸರು :
ಶಿವಮೊಗ್ಗ ನಗರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದಶಂಕಿತ ಉಗ್ರ ಮಾಜ್ ಮುನೀರ್ ಅಹಮ್ಮದ್ ತಂದೆ ಶುಕ್ರವಾರ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಇಂದು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆರೋಪಿಗೆ ಅವಕಾಶ ನೀಡಲಾಗಿದ್ದು, ಮುನೀರ್ ಅಹಮ್ಮದ್ನನ್ನು ಪೊಲೀಸರು ಇಂದು ಶಿವಮೊಗ್ಗ ಪೊಲೀಸರು ತೀರ್ಥಹಳ್ಳಿಗೆ ಕರೆದೊಯ್ದಿದ್ದಾರೆ. ತೀರ್ಥಹಳ್ಳಿಯ ಸೂಪ್ಪುಗುಡ್ಡೆಯಲ್ಲಿನ ಮಾಜ್ ನಿವಾಸಕ್ಕೆ ಕರೆದುಕೊಂಡು ಹೋಗಿ ಅಂತಿಮ ದರ್ಶನದ ಬಳಿಕ ವಾಪಸ್ ಕರೆದುಕೊಂಡು ಬರಲಾಗುತ್ತದೆ. ಶಂಕಿತ ಉಗ್ರರ ಬಂಧನ ತಂಡದ ಡಿವೈಎಸ್ಪಿ ಶಾಂತವೀರಯ್ಯ ಅವರು ಪೊಲೀಸ್ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇಂದು ಮಧ್ಯಾಹ್ನ ಮಾಜ್ ತಂದೆಯ ಅಂತಿಮ ಸಂಸ್ಕಾರ ತೀರ್ಥಹಳ್ಳಿಯ ಖಬರಸ್ಥಾನದಲ್ಲಿ ನಡೆದಿದೆ.
ಮಾಸಾಂತ್ಯಕ್ಕೆ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧತೆ:
ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ರನ್‌ವೇ, ಟರ್ಮಿನಲ್ ಕಟ್ಟಡ, ವಿಮಾನಸಂಚಾರ ನಿಯಂತ್ರಣ ಘಟಕ ಸೇರಿದಂತೆ ಅನೇಕ ಕಾಮಗಾರಿಗಳು ಭರದಿಂದ ಸಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗಳು ನವೆಂಬರ್ ಮಾಸಾಂತ್ಯಕ್ಕೆ ಪೂರ್ಣಗೊಂಡು ವಿಮಾನ ನಿಲ್ಧಾಣ ಲೋಕಾರ್ಪಣೆಗೆ ಸರ್ವಸನ್ನದ್ಧಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು. ಅವರು ಇಂದು ಸೋಗಾನೆ ವಿಮಾನ ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಪರ ಕಾರ್ಯದರ್ಶಿ ಶ್ರೀಮತಿ ಉಷಾಪಾಧಿ, ಗೌರವಗುಪ್ತಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ತಂತ್ರಜ್ಞರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಯಾವುದೇ ಒಂದು ರಾಜ್ಯ, ಜಿಲ್ಲೆ, ಸಂಸ್ಥೆ ಅಥವಾ ವ್ಯವಸ್ಥೆ ನಿರೀಕ್ಷಿತ ಪ್ರಗತಿ ಸಾಧಿಸಲು ಮೂಲಭೂತ ಸೌಕರ್ಯಗಳು ಇರಬೇಕಾದುದು ಅಗತ್ಯ. ಬಹುದಿನಗಳ ಈ ಕನಸಿನ ಯೋಜನೆಯ ಅನುಷ್ಠಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸತತ ಪರಿಶ್ರಮ, ಸಂಕಲ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಹಕಾರವೂ ಕೂಡ ಸ್ಮರಣೀಯವಾದುದು ಎಂದರು.
ಉಗ್ರರ ಮೂಲ ತೀರ್ಥಹಳ್ಳಿ ಆದರೂ ಸಹವಾಸ ಕರಾವಳಿಯದ್ದು :
ಬಂಧಿತ ಶಂಕಿತ ಉಗ್ರರು ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯಗಳು ನಡೆಯುತ್ತವೆ. ಕರಾವಳಿಯಲ್ಲಿನ ಮತಾಂಧರ ಸಹವಾಸದಿಂದ ಅವರು ಈ ರೀತಿಯಾಗಿದ್ದಾರೆ. ಶಂಕಿತ ಉಗ್ರ ಮೂಲ ತೀರ್ಥಹಳ್ಳಿಯಾಗಿದ್ದರೂ ಸಹವಾಸ ಕರಾವಳಿಯದ್ದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಹಾಸನ:
ಭವಾನಿ ರೇವಣ್ಣ ಪರಾಭವ ನಿಶ್ಚಿತ; ಶಾಸಕ ಪ್ರೀತಂ ಗೌಡ ಟಾಂಗ್ :
ಹಾಸನದಲ್ಲಿ ಟಿಕೆಟ್ ಆಕಾಂಕ್ಷಿಯಾಗಿರುವ ಭವಾನಿ ರೇವಣ್ಣಗೆ ಶಾಸಕ ಪ್ರೀತಂಗೌಡ ಟಾಂಗ್ ನೀಡಿದ್ದಾರೆ. ಅವರಿಗೆ ಹಾಸನದ ಗಣಪತಿಗಳು ಎಲ್ಲಿವೆ, ರೋಡ್ ಯಾವುದು ಎನ್ನೋದು ಗೊತ್ತಿರಲಿಲ್ಲ. ಪ್ರೀತಂಗೌಡ ಬಂದಮೇಲೆ ಹಾಸನ ಹೆಂಗಿದೆ ಎಂದು ನೋಡೋ ಅವಕಾಶ ಕಲ್ಪಿಸಿ ಕೊಟ್ಟಿದ್ದೇನೆ, ಇನ್ನೂ ಅವರು ಗಣಪತಿ ನೋಡುತ್ತಿದ್ದಾರೆ. ಹಳ್ಳಿ ಕಡೆಗೆ ಹೋಗಲಿ, ನಾವಿದ್ದಾಗ ಏನು ಮಾಡಿದ್ಚಿ, ಪ್ರೀತಂಗೌಡ ಏನು ಮಾಡಿದ್ದಾರೆ ಎಂದು ನೋಡಲಿ. ಬಹುಶಃ ಅವರು ಎಲ್ಲ ಹಳ್ಳಿಗಳನ್ನ ಸುತ್ತಾಡಿ ಬಂದ್ರೆ ಚುನಾವಣೆ ಗೆ ನಿಲ್ಲೋದಿಲ್ಲ. ಆಗಿರೋ ಅಭಿವೃದ್ಧಿ ನೋಡಿ ಜನರ ಸ್ಪಂದನೆ ಹೇಗಿರುತ್ತೆ ಎಂದು ಗೊತ್ತಾಗುತ್ತೆ. ಗಣಪತಿ ಇರೋಕಡೆ ಜನ ಇರ್ತಾರೆ ಅಲ್ಲಿ ಕರ್ಕೊಂಡ್ ಹೋಗಿ ಹಾರ ಹಾಕಿಸ್ತಾರೆ. ಓಹ್ ಇವರೆಲ್ಲಾ ನನಗೇ ಓಟ್ ಹಾಕ್ತಾರೆ ಅನ್ಕೊಂಡು ಸುತ್ತಾಡುತ್ತಾರೆ. ನಿಜವಾಗಿ ಹೋಗಬೇಕಿರೋದು ಹಳ್ಳಿಗೆ ಜನರ ಮದ್ಯೆ, ಕಾರ್ತಕರ್ತರ ಮಧ್ಯೆ ಹೋಗಲಿ. ಅಲ್ಲಿ ಯಾವ್ಯಾವ ಹಳ್ಳಿ ಜನ ಅವರ ಜೊತೆ ಇರ್ತಾರೆ ಗೊತ್ತಾದ ಮೇಲೆ ಚುನಾವಣೆಗೆ ನಿಲ್ತಾರಾ ಕೇಳಿ ನೋಡಿ. ಈಗ ಆಕ್ಟೀವ್ ಆಗಿದಾರೆ, ಎಲ್ಲವನ್ನು ನೋಡಿದ ಮೇಲೆ ನನ್ನಿಂದ ಆಗಲ್ಲ ಎಂದು ಬೇರೆಯವರನ್ನ ಅಭ್ಯರ್ಥಿ ಮಾಡ್ತಾರೆ. ಇವರು ಅಭ್ಯರ್ಥಿ ಅದರೆ ನನಗೆ ಬಹಳ ಸಂತೋಷ . ಅವರು ಎಲ್ಲ ಹಳ್ಳಿ ಸುತ್ತಿ ಬಂದ ಮೇಲೆ ಜನರು ನಿಲ್ಲಲಿ ಎಂದರೆ ನಿಲ್ಲಲಿ. ಅವರಿಗೆ ಚುನಾವಣೆ ಗೆ ನಿಲ್ಲೋ ಧೈರ್ಯ ಬರಲಿ ಎಂದು ವಿನಾಯಕನಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದು ಠಕ್ಕರ್ ನೀಡಿದರು.
ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಹಾಸನದ ತಂಡ:
ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶುಕ್ರವಾರಸಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಖೋಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ 400 ಮೀ. ಓಟದ ಸ್ಪರ್ಧೆಯಲ್ಲಿ ಇದೇ ಶಾಲೆಯ ವಿದ್ಯಾರ್ಥಿನಿ ಇಂಚರಾ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಕೊಡಗು:
ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು :
ವಿದ್ಯುತ್ ಸ್ಪರ್ಶಿಸಿಸಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ವೀರಭದ್ರ ಮುನೇಶ್ವರ ದೇವಸ್ಥಾನದಲ್ಲಿ ನಡೆದಿದೆ. ತಮಿಳುನಾಡು ಮೂಲದ ಕಾರ್ಮಿಕ ರಮೇಶ್ ಕದಿರ್ವೇಲು ಮೃತ ದುರ್ದೈವಿ. ರಮೇಶ್ ಕದಿರ್ವೇಲು ದೇವಸ್ಥಾನದ ಪ್ರವೇಶದ್ವಾರಕ್ಕೆ ಬಣ್ಣ ಬಳಿಯುತ್ತಿದ್ದರು. ಇದೇ ವೇಳೆಗೆ ಅಲ್ಲೇ ಇದ್ದ ಕಬ್ಬಿಣದ ರಾಡ್ಗೆ ವಿದ್ಯುತ್ ಸ್ಪರ್ಶವಾಗಿತ್ತು. ಬಣ್ಣ ಬಳಿಯುತ್ತ ಕಬ್ಬಿಣ ರಾಡ್ನ್ನು ಸ್ಪರ್ಶಿಸಿದ್ದರಿಂದ ರಮೇಶ್ ಸಾವನ್ನಪ್ಪಿರಬಹುದಾಗಿದೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ :
ಕುತ್ತಿಗೆಗೆ ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದಲ್ಲಿ ನಡೆದಿದೆ. ಮೈತಾಡಿ ಗ್ರಾಮದ ಶರತ್ ಪೂವಯ್ಯ (36) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶರತ್ ಪೂವಯ್ಯ ಸಿಂಗಲ್ ಬ್ಯಾರಲ್ ಗನ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸಂಬಂಧ ಸಂಬಂಧಿಕರು ಅತೀವ ನೋವನ್ನು ವ್ಯಕ್ತಪಡಿಸಿದ್ದಾರೆ.
ದಸರಾ ಕ್ರೀಡಾಕೂಟದಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳು :
ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬೆಟ್ಟಗೇರಿ ವುಶು ಸಂಸ್ಥೆಯ ಆರು ಕ್ರೀಡಾಪಟುಗಳು ಬೆಳ್ಳಿ ಪದಕವನ್ನು ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಾದ ಪಿ.ಬಿ.ಧನುಷ್, ಸಿ.ಸಿ.ಗಗನ್, ಎ.ಎಸ್.ಸುದರ್ಶನ್, ಪಿ.ಎನ್.ಜೀವ, ಎ.ಎಸ್.ಪವನ್ ಹಾಗೂ ಬಿ.ಸಿ.ಗೌರವ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಸೆ.26 ಮತ್ತು 27 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ. ಕೊಡಗು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುದರ್ಶನ್ ಹಾಗೂ ತರಬೇತುದಾರ ಬಿ.ಎ.ಆನಂದ ಪೂಜಾರಿ ಬೆಟ್ಟಗೇರಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.


0 Comments