ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಎನ್ ಸಿಸಿ (National Cadet Corps) ವತಿಯಿಂದ ನಡೆಯುವ TSC (Thal Sainik Camp) ಗೆ ಇಲ್ಲಿನ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿ ವಿವೇಕ್ ದೆಹಲಿಗೆ ಆಯ್ಕೆಯಾಗಿದ್ದಾನೆ.

ಆಯ್ಕೆ ಪ್ರಕ್ರಿಯೆ ಹೇಗೆ? 

ಪ್ರತಿವರ್ಷ ಎನ್ ಸಿಸಿ ವತಿಯಿಂದ ವಿದ್ಯಾರ್ಥಿಗಳಲ್ಲಿ ಸೈನ್ಯದ ಕುರಿತಂತೆ ತರಬೇತಿ ನೀಡುವ ನಿಟ್ಟಿನಲ್ಲಿ ಈ ಥಲ್ ಸೈನಿಕ್ ಕ್ಯಾಂಪ್ ಆಯೋಜನೆ ಮಾಡಲಾಗುತ್ತದೆ. ದೇಶಾದ್ಯಂತ 17 ಎನ್ ಸಿಸಿ ಡೈರೆಕ್ಟರೇಟ್ ನಿಂದ ಸುಮಾರು 85,000ಕ್ಕೂ ಅಧಿಕ ಕೆಡೆಟ್ಸ್ (ಎನ್ ಸಿಸಿ ವಿದ್ಯಾರ್ಥಿಗಳು) ಗಳ ಪೈಕಿ ಒಂದು ಡೈರೆಕ್ಟರೇಟ್ ನಿಂದ ಆಯಾ ಸಂಖ್ಯಾಬಲದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ನ ಸುಮಾರು 5 ಸಾವಿರ ಕೆಡೆಟ್ಸ್ ಗಳ ಪೈಕಿ ಕೇವಲ 49 ಎನ್ ಸಿಸಿ ಕೆಡೆಟ್ಸ್ ಗಳನ್ನಷ್ಟೇ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಶ್ರೀ ರಾಮ ಸೇನೆ ವತಿಯಿಂದ ಶೃಂಗೇರಿಯಲ್ಲಿ ಜಿಲ್ಲಾ ಮಟ್ಟದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಆಯೋಜನೆ


ಒಟ್ಟು 6 ಕ್ಯಾಂಪ್ ಗಳು ನಡೆಯುತ್ತವೆ. ಪ್ರತೀ ಕ್ಯಾಂಪ್ ನಲ್ಲೂ ಆಯ್ಕೆಯಾಗುವ ಮೂಲಕ ಶೃಂಗೇರಿಯ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿ ವಿವೇಕ್ ಈ ಬಾರಿಯ TSC ಕ್ಯಾಂಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ.

ಕೊರೋನಾ ಬಂದ ನಂತರ ಎರಡು ವರ್ಷಗಳ ಕಾಲ ಯಾವುದೇ ಕ್ಯಾಂಪ್ ಗಳು ನಡೆದಿರಲಿಲ್ಲ. ಮೊದಲಿನಿಂದಲೂ TSCಗೆ ಆಯ್ಕೆ ಆಗಬೇಕೆಂಬ ಗುರಿ, ಕನಸಿತ್ತು ಈಗ ಅದು ನನಸಾಗಿದೆ. ದೆಹಲಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಹೆಮ್ಮೆಯಾಗುತ್ತಿದೆ. - SUO ವಿವೇಕ್, ಎನ್ ಸಿಸಿ ಕೆಡೆಟ್

ಕ್ಯಾಂಪ್ ನ ತರಬೇತಿ ಹೇಗೆ? 

ಒಟ್ಟು ಆರು ಕ್ಯಾಂಪ್ ಗಳು ನಡೆದಿದ್ದು, ಕ್ಯಾಂಪ್ ಗಳಲ್ಲಿ ಸೇನೆಗೆ ಸಂಬಂಧಿಸಿದ ಬೇಸಿಕ್ ತರಬೇತಿಯನ್ನು ನೀಡಲಾಗುತ್ತದೆ. ಒಂದು ಕ್ಯಾಂಪ್ 10 ದಿನ ಇರಲಿವೆ. ಫೈರಿಂಗ್, ಫೀಲ್ಡ್ ಕ್ರಾಫ್ಟ್, ಬ್ಯಾಟಲ್ ಕ್ರಾಫ್ಟ್, ಮ್ಯಾಪ್ ರೀಡಿಂಗ್, ಅಬ್ಸ್ಟಕಲ್ ಕೋರ್ಸ್, ಹೆಲ್ತ್ & ಹೈಜಿನ್, ರನ್ನಿಂಗ್ ಸೇರಿದಂತೆ ಅತ್ಯಂತ ಕಠಿಣ ತರಬೇತಿಯನ್ನು ಸೇನೆಯಿಂದ ನೀಡಲಾಗುತ್ತದೆ. ಸುಮಾರು ಎರಡು ತಿಂಗಳು ನಡೆಯುವ ಕ್ಯಾಂಪ್ ನಲ್ಲಿ ದೇಶಾದ್ಯಂತ ಕೇವಲ 833 ಕೆಡೆಟ್ಸ್ ಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಅಂತಿಮ ಕ್ಯಾಂಪ್ ದೆಹಲಿಯಲ್ಲಿ ನಡೆಯಲಿದ್ದು, ಈ ಕ್ಯಾಂಪ್ ನಲ್ಲಿ ವಿವೇಕ್ ಭಾಗವಹಿಸುವ ಮೂಲಕ ಕೀರ್ತಿ ತಂದಿದ್ದಾನೆ.

TSC ಕ್ಯಾಂಪ್ ನಲ್ಲಿ ದೆಹಲಿಗೆ ಆಯ್ಕೆಯಾದ ವಿವೇಕ್ ಗೆ ಜೆಸಿಬಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಸ್ವಾಮಿ, ಎನ್ ಸಿಸಿ ಅಧಿಕಾರಿ ಕ್ಯಾಪ್ಟನ್ ಡಾ. ಕುಮಾರಸ್ವಾಮಿ ಉಡುಪ, ಕಾಲೇಜಿನ ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.