N.R ಪುರ: (ನ್ಯೂಸ್ ಮಲ್ನಾಡ್ ವರದಿ) ನಾಡ ಬಂದೂಕಿನಿಂದ ಗುಂಡು ಹಾರಿದ ಪರಿಣಾಮ ಯುವಕ ಸಾವನ್ನಪ್ಪಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಹರಾವರಿ ಗ್ರಾಮದ ಹಕ್ಕಲು ಮನೆಯಲ್ಲಿ ಈ ಘಟನೆ ಭಾನುವಾರ ರಾತ್ರಿಯ ವೇಳೆ ನಡೆದಿದ್ದು ಜಾಕ್ಸನ್‌ಪಿರೇರಾ ಎಂಬ ವಿವಾಹಿತ ಯುವಕ ಮೃತಪಟ್ಟಿದ್ದಾರೆ.
ಜಾಕ್ಸನ್ ಪಿರೇರಾ ಕಳೆದ ನಾಲ್ಕು ತಿಂಗಳುಗಳ ಹಿಂದಷ್ಟೇ ವಿವಾಹವಾಗಿದ್ದರು. ಭಾನುವಾರ ರಾತ್ರಿ 9.30 ಸುಮಾರಿಗೆ ಆಕಸ್ಮಿಕವಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಇಲ್ಲಿನ ಹರಾವರಿ ಗ್ರಾಮದ ಹಕ್ಕಲು ಮನೆಯ ವಿಶಾಂತಿಡಿಸೋಜ ಎಂಬುವವರ ಮನೆಗೆ ದಾವಣ ಗ್ರಾಮದ ಸೂರನಕೊಡಿಗೆಯ ಜಾಕ್ಸನ್‌ಪಿರೇರಾ ಅವರು ಮಹೀಂದ್ರಾ ಜೀಪಿನಲ್ಲಿ ಭಾನುವಾರ ಬಂದಿದ್ದರು, ರಾತ್ರಿಯ ವೇಳೆ ಪತ್ನಿ ಶರಲ್‌ಡಿಸೋಜ ಅವರೊಂದಿಗೆ ತಮ್ಮ ಮನೆಗೆ ವಾಪಾಸು ಹೋಗಲು ಸಿದ್ದತೆ ಮಾಡಿಕೊಂಡು ಜೀಪು ತೆಗೆಯಲು ಜೀಪು ಶೆಡ್‌ಗೆ ಒಬ್ಬರೇ ಹೋಗಿದ್ದಾರೆ, ಜೀಪ್ ತರಲು ಹೋದ ಎರಡೇ ನಿಮಿಷದಲ್ಲಿ ಜೋರಾದ ಶಬ್ದ ಕೇಳಿ ಬಂದಿದೆ. ತಕ್ಷಣ ಧಾವಿಸಿದ ಕುಟುಂಬಸ್ಥರು ಹೋಗಿ ನೋಡಿದಾಗ ಜಾಕ್ಸನ್‌ಪಿರೇರಾ ಅವರು ಜೀಪಿನಿಂದ ಕೆಳಗೆ ಬಿದ್ದಿದ್ದರು ಎನ್ನಲಾಗಿದ್ದು, ಅವರ ಎದೆಯ ಭಾಗದಲ್ಲಿ ರಕ್ತ ಬರುತ್ತಿತ್ತು.
ಜೀಪಿನಲ್ಲಿ ಲೋಡ್ ಆಗಿದ್ದ ನಾಡ ಬಂದೂಕು ಇತ್ತು ಎನ್ನಲಾಗಿದ್ದು, ಅದನ್ನು ಸರಿಯಾಗಿ ಇಡದ ಕಾರಣ ಗುಂಡು ಸಿಡಿದಿದೆ ಎನ್ನಲಾಗಿದೆ. ತಕ್ಷಣವೇ ಜಾಕ್ಸನ್‌ಪಿರೇರಾ ಅವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಗಾಯದ ತೀವ್ರತೆ ಹೆಚ್ಚಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ಜಾಕ್ಸನ್ ಪಿರೇರಾ ಅವರ ತಂದೆ ಜಾನ್‌ಪಿರೇರಾ ಅವರು ಸೋಮವಾರ ಬೆಳಿಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ನನ್ನ ಮಗನು ಹರಾವರಿ ಗ್ರಾಮದ ಹಕ್ಕಲು ಮನೆಯ ವಿಶಾಂತಿಡಿಸೋಜ ಅವರ ಮನೆಗೆ ಹೋಗಿದ್ದನು. ರಾತ್ರಿ ವಾಪಾಸು ಮನೆಗೆ ಹೊರಡುವಾಗ ಜೀಪಿನ ಹಿಂದೆ ಇದ್ದ ಲೋಡು ಮಾಡಿದ್ದ ಬಂದೂಕನ್ನು ಸರಿಯಾಗಿ ಎತ್ತಿಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದರಿಂದ ಬಂದೂಕಿನ ಟ್ರಿಗರ್ ಅಥವಾ ಕುದುರೆ ಜೀಪಿಗೆ ತಾಗಿ ಬಂದೂಕಿನಿಂದ ಗುಂಡು ಸಿಡಿದು ಜಾಕ್ಸನ್ ಪಿರೇರಾ ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ.
ಘಟನಾ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ :
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ನಗದನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ನಗರದಕೋಟೆಯ ಮೂರುಮನೆ ಹಳ್ಳಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಚಿಕ್ಕಮಗಳೂರು ಪೊಲೀಸರು 7 ಜನ ಆರೋಪಿಗಳು ಮತ್ತು 33,430 ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ಒಂಭತ್ತು ಜನ ಆರೋಪಿಗಳು ಜೂಜಾಟದಲ್ಲಿ ತೊಡಗಿದ್ದು ದಾಳಿಯ ವೇಳೆ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಂಧಿತರನ್ನು ಸಿ.ಎನ್ ಚಂದ್ರಶೇಖರ್, ಸಿ.ಎಂ ವಿನಯ್ ಕುಮಾರ್, ಸಿ.ಎಸ್ ಹರೀಶ, ಅಶ್ವಥ್, ರಾಕೇಶ್, ರಕ್ಷಿತ್, ರಂಜಿತ್ ಕುಮಾರ್, ಕೆ.ಪಿ ನಟರಾಜ್ ಎಂದು ಗುರುತಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಚಿಕ್ಕಮಗಳೂರು ನಗರದ ಪಿ.ಎಸ್.ಐ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ನಡೆಸಿದ್ದಾರೆ.








0 Comments