ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರದ ವಿವಿಧ ಅಂಗಡಿ, ಹೋಟೆಲ್‌ಗಳ ಮೇಲೆ ಇಂದು ನಗರಸಭೆ ಅಧಿಕಾರಿಗಳು ದಾಳಿ ನಡೆಸಿ 100 ಕೆ.ಜಿ ಗೂ ಅಧಿಕ ಪ್ಲಾಸ್ಟಿಕ್ ನ್ನು ವಶಕ್ಕೆ ಪಡೆದು ಅನೇಕ ಅಂಗಡಿಗಳ ಮೇಲೆ ದಂಡವನ್ನು ವಿಧಿಸಿದೆ.
ಇಂದು ದಾಳಿ ನಡೆಸಿದ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ತಂಡ 100 ಕೆ.ಜಿ ಗೂ ಹೆಚ್ಚಿನ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿರುವುದಲ್ಲದೆ, ಶುಚಿತ್ವ ಕಾಪಾಡಿಕೊಳ್ಳದ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನೇತೃತ್ವದಲ್ಲಿ ರತ್ನಗಿರಿ ರಸ್ತೆ, ಉಪ್ಪಳ್ಳಿ, 60 ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ಲಕ್ಷ್ಮಿಕೆಫೆ, ಅನ್ನಪೂರ್ಣ ಹೋಮ್ ಮೇಡ್ ಘಟಕ, ರೆಹಮಾನಿಯ ಟ್ರೇಡರ್ಸ್ ಇನ್ನಿತರೆ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ತಂಡ ವಶಕ್ಕೆ ಪಡೆದಿದೆ.
ಇದೇ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಸಹ ಕಂಡು ಬಂದ ಹಿನ್ನೆಲೆಯಲ್ಲಿ ದಂಡವಿಧಿಸಿ ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದ್ದಲ್ಲದೆ, ಅನ್ನಪೂರ್ಣ ಹೋಮ್ ಮೇಡ್ ಅಂಗಡಿಯ ಬಾಗಿಲನ್ನು ನಗರಸಭೆ ಅಧಿಕಾರಿಗಳು ಮುಚ್ಚಿಸಿದರು.
ಪ್ರತೀ ಅಂಗಡಿಗಳಲ್ಲೂ ಸುಮಾರು 20 ಕೆ.ಜಿ ಗೂ ಅಧಿಕ ಪ್ರಮಾಣದ ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದ್ದು, ಒಟ್ಟಾರೆ ನೂರಾರು ಕೆ.ಜಿ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು.
ಈ ಕುರಿತಾಗಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಕಳೆದ 10 ತಿಂಗಳಿನಿಂದ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಸಭೆ ಪ್ರಯತ್ನಿಸುತ್ತಲೇ ಇದೆ. ತಳ್ಳುಗಾಡಿಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಕೆಲವು ಅಂಗಡಿಯವರು ಪ್ಲಾಸ್ಟಿಕ್ ವಸ್ತುಗಳನ್ನು ಬೇರೆ ಕಡೆ ಗೋಡಾನ್‌ಗಳಲ್ಲಿ ಬಚ್ಚಿಟ್ಟು ಗ್ರಾಹಕರಿಗೆ ಕೊಡುತ್ತಿರುವುದು ಸಹ ನಗರಸಭೆಯ ಗಮನಕ್ಕೆ ಬಂದಿದೆ, ಈ ಘಟನೆಗಳು ಮುಂದುವರೆದರೆ ಮುಲಾಜಿಲ್ಲದೆ ಅವರ ಅಂಗಡಿ ಪರವಾನಿಗೆಯನ್ನು ಕೂಡಲೇ ರದ್ದುಗೊಳಿಸಿ ದಂಡವಿಧಿಸಲಾಗುವುದು ಎಂದು ಎಚ್ಚರಿಸಿದರು.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ, ಆದರೆ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪೂರ್ಣ ಪ್ರಮಾಣದಲ್ಲಿ ಸಹಕಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಅಂತೆಯೇ ಪ್ರತಿಯೊಬ್ಬ ಗ್ರಾಹಕ ಹಾಗೂ ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸ್ಪಂದಿಸಿದಲ್ಲಿ ನಗರಸಭೆಯ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ ಎಂದರು. ಈ ವಿಚಾರದಲ್ಲಿ ಸಾರ್ವಜನಿಕರು ಜಾಗೃತರಾಗಬೇಕು , ಅವರ ಸಹಕಾರದಿಂದ ಮಾತ್ರ ನಗರ ಸ್ವಚ್ಚ ಹಾಗೂ ಸುಂದರವಾಗುತ್ತದೆ ಎಂದರು.
ಈ ಸಮಯದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ನಾಗಪ್ಪ, ಈಶ್ವರ್, ಶಶಿರಾಜ್ ಅರಸ್, ಸೂಪರ್ವೈಸರ್ ಅಣ್ಣಯ್ಯ, ವಿವೇಕ್, ಶ್ರೀನಿವಾಸ್ ನಾಗರಾಜ್ ಇನ್ನಿತರೆ ಅಧಿಕಾರಿಗಳು ಇದ್ದರು.








0 Comments