ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದಲ್ಲಿ ಶೃಂಗೇರಿ ತಾಲೂಕು ಕಛೇರಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜೇತ್ ಎಂಬುವವರು ಈ ಹಿಂದೆ ಸಾಲ ಪಡೆದಿದ್ದರು, ಆದರೆ ವಿಜೇತ್ ಕಳೆದ ಜನವರಿ ತಿಂಗಳಲ್ಲಿ ಕಾರಣಾಂತರಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು, ಆ ನಂತರ ಏಪ್ರಿಲ್ ತಿಂಗಳಲ್ಲಿ ಅವರಿಗೆ ಬರಬೇಕಿದ್ದ 8 ತಿಂಗಳ ಸಂಬಳ ಅವರ ಖಾತೆಗೆ ಜಮಾ ಆಗಿದೆ, ಆ ಸಂದರ್ಭದಲ್ಲಿ ಸಾಲ ನೀಡಿದ್ದ ಸೊಸೈಟಿ ಅವರು ಜಾಮೀನುದಾರರಾಗಿದ್ದ ಅವರ ತಂದೆಯವರಿಗೆ ಅಥವಾ ಕುಟುಂಬಸ್ಥರಿಗೆ ಮಾಹಿತಿ ನೀಡದೆ, ನೋಟೀಸ್ ಸಹ ನೀಡದೆ ಸಾವನ್ನಪ್ಪಿದ್ದ ವಿಜೇತ್ ಚೆಕ್ ಬಳಸಿ ತಮಗೆ ಮರುಪಾವತಿ ಆಗಬೇಕಿದ್ದ 76,500ರೂ ಹಣವನ್ನು ಪಡೆದುಕೊಂಡಿರುತ್ತಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ
ಸಾಲ ವಸೂಲಾತಿಗೆ ಅದರದೇ ಆದ ನೀತಿ ನಿಯಮಗಳಿವೆ, ಕುಟುಂಬಸ್ಥರಿಗೆ ಮಾಹಿತಿ ನೀಡಿದಲ್ಲಿ ಸಾಲ ಮರುಪಾವತಿ ಮಾಡಲಾಗುತ್ತಿತ್ತು ಆದರೆ ವಿಜೇತ್ ಸಾವಿನ ನೋವಿನಿಂದ ಅವರ ಕುಟುಂಬ ಹೊರಬರುವ ಮೊದಲೇ ಕನಿಷ್ಠ ಮಾಹಿತಿ ನೀಡದೆ ಅವನ ಅಕೌಂಟ್ ನಿಂದ ಚೆಕ್ ಬಳಸಿ ಹಣ ಪಡೆದಿರುವುದು ಎಷ್ಟು ಸರಿ, ಅದನ್ನು ಕೇಳಲು ಹೋಗಿದ್ದ ಕುಟುಂಬಸ್ಥರಿಗೆ ಸರಿಯಾಗಿ ಉತ್ತರಿಸಿಲ್ಲ.
ತಹಸೀಲ್ದಾರರ ಮೂಲಕ ಮನವಿ ಸಲ್ಲಿಸುತ್ತಿದ್ದು ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ. ನ್ಯಾಯ ದೊರಕದೇ ಹೋದಲ್ಲಿ ಮುಂಬರುವ ದಿನದಲ್ಲಿ ಪ್ರತಿಭಟನೆ ಮಾಡುವುದಾಗಿ ಕುಟುಂಬಸ್ಥರಾದ ಕೊಚ್ಚವಳ್ಳಿ ಚೆನ್ನಕೇಶವ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಜೇತ್ ತಂದೆ ನಾಗರಾಜ್, ಬೆಟ್ಟಗೆರೆ ಸೊಸೈಟಿ ಅಧ್ಯಕ್ಷರಾದ ರಮೇಶ್ ಭಟ್, ಕುಟುಂಬಸ್ಥರಾದ ನಾಗೇಶ್ ಹೆಗ್ಡೆ, ಜಗದೀಶ್, ಪುರುಷೋತ್ತಮ ಇದ್ದರು.
ಎಲ್ಲವೂ ಪಾರದರ್ಶಕ, ಕಾನೂನು ಬದ್ಧವಾಗಿ ನಡೆದಿದೆ ಸಂಸ್ಥೆಯಿಂದ ಸ್ಪಷ್ಟನೆ:
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಶೃಂಗೇರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಪ್ರದೀಪ್ ಗಂಡಘಟ್ಟ ಅವರು ಎಲ್ಲವೂ ಪಾರದರ್ಶಕ, ಕಾನೂನು ಬದ್ಧವಾಗಿಯೇ ನಡೆದಿದೆ. ಸಂಸ್ಥೆಯಿಂದ ಸಾಲ ನೀಡಲಾಗಿತ್ತು, ಅದರ ಮರುಪಾವತಿಗೆ ಬಾಕಿ ಮೊತ್ತದ ಚೆಕ್ ಅನ್ನು ವಿಜೇತ್ ಜನವರಿ ತಿಂಗಳಲ್ಲಿ ನೀಡಿದ್ದರು, ಚೆಕ್ ನ ಕಾಲಾವಧಿಯಾದ ಮೂರು ತಿಂಗಳಿನ ಒಳಗೆ ಅದನ್ನು ವಿಜೇತ್ ಅವರ ಖಾತೆ ಇರುವ ಕರ್ಣಾಟಕ ಬ್ಯಾಂಕ್ ಗೆ ಸಲ್ಲಿಕೆ ಮಾಡಿದ್ದು ಅವರ ಖಾತೆಯಿಂದ ನಮ್ಮ ಬ್ಯಾಂಕಿನ ಸಾಲದ ಖಾತೆಗೆ ಜಮಾ ಆಗಿದೆ, ಈ ನಡುವೆ ವಿಜೇತ್ ಅವರ ಸಾವಿನ ಕುರಿತು ಅವರ ಕುಟುಂಬಸ್ಥರು ನಮಗೆ ಯಾವುದೇ ಅಧಿಕೃತ ದಾಖಲೆ ಅಥವಾ ಮಾಹಿತಿಯನ್ನು ನೀಡಿರಲಿಲ್ಲ, ಸಂಘದ ಹಣವು ಎಲ್ಲಾ ಸಾರ್ವಜನಿಕರ ಹಣವಾಗಿದ್ದು ಕಾನೂನುಬದ್ಧವಾಗಿ ಹಿಂಪಡೆಯಲಾಗಿದೆ, ನಮ್ಮ ಸಂಸ್ಥೆಯ ಸಿಇಓ ಅದನ್ನು ನಿಯಮಾನುಸಾರವೇ ಮಾಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.









0 Comments