ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತ ವಯಸ್ಸಿನ ಬಾಲಕರ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ವ್ಯಕ್ತಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಲಯ ಆದೇಶಿಸಿದೆ. 

ಸೊರಬ ತಾಲ್ಲೂಕಿನ ವಾಸಿಯಾದ ತಿಮ್ಮಪ್ಪ ಎಂಬ 42 ವರ್ಷ ಪ್ರಾಯದ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕರ ಅಶ್ಲೀಲ ವೀಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಕುರಿತಾಗಿ ಈ ಹಿಂದೆ ಸೈಬರ್ ಟಿಪ್ ಲೈನ್ ನಿಂದ ಬಂದ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲೆಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.



ಈ ಪ್ರಕರಣದ ಕುರಿತಾಗಿ ಆಗಿನ ತನಿಖಾಧಿಕಾರಿಗಳಾಗಿದ್ದ ಗುರುರಾಜ್‌, ಕೆ.ಟಿ ಇನ್ಸ್ಪೆಕ್ಟರ್ ಸಿಇಎನ್‌ ಪೊಲೀಸ್‌ ಠಾಣೆ ಇವರು ತನಿಖೆ ಕೈಗೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ರವರು ಸರ್ಕಾರದ ಪರವಾಗಿ ವಾದಮಂಡಿಸಿದ್ದು Addl District and Sessions Judge, FTSC–I (POCSO) Shivamogga ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಲತಾ ರವರು ನಿನ್ನೆ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.

ಶಿಕ್ಷೆಯ ಪ್ರಮಾಣ: 

ಆರೋಪಿ ತಿಮ್ಮಪ್ಪ 42 ವರ್ಷ ಸೊರಬ ತಾಲ್ಲೂಕು ಈತನ ವಿರುದ್ಧ ಪೋಕ್ಸೋ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 1,44,000/- ರೂ ದಂಡ, ದಂಡದ ಮೊತ್ತ ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 3 ವರ್ಷಗಳ ಕಾಲ ಸಾದಾ ಕಾರಗೃಹವಾಸ ಶಿಕ್ಷೆ ನೀಡಿ ಆದೇಶ ನೀಡಲಾಗಿದೆ.