ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣ ಹೊರವಲಯದ ಸೇಂಟ್ ನಾರ್ಬರ್ಟ್ ಆಂಗ್ಲಮಾಧ್ಯಮ ಶಾಲೆ ಮಕ್ಕಳಿಗೆ ದಸರಾ ರಜೆ ನೀಡಲು ಶಾಲಾ ಆಡಳಿತ ಮಂಡಳಿ ತಕರಾರು ನಡೆಸುತ್ತಿರುವುದನ್ನು ವಿರೋಧಿಸಿ ಪೋಷಕರು ಹಾಗೂ ಸಾರ್ವಜನಿಕರು ಶಾಲೆಗೆ ತೆರಳಿ ಪ್ರತಿಭಟನೆ ನಡೆಸಿದರು.
ಶಾಲೆ ಆವರಣದಲ್ಲಿ ಪ್ರತಿಭಟಿಸಿ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ದಸರಾ ಹಬ್ಬಕ್ಕೆ ರಜೆ ನೀಡಲಾಗಿದೆ ಈ ಶಾಲೆಯಲ್ಲಿ ಮಾತ್ರ ರಜೆ ನೀಡಿಲ್ಲ, ಪಾಲಕರ ಸಮಿತಿ ಕೂಡ ರಚಿಸಿಲ್ಲ ಇದು ಸರಿಯಲ್ಲ ಎಂದು ಆರೋಪಿಸಿದರು.
ಅಂತೆಯೇ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಎಂಬುದಾಗಿಯೂ ಆಕ್ರೋಶ ವ್ಯಕ್ತಪಡಿಸಿದರು. ದಸರಾ ಹಬ್ಬದ ಸಲುವಾಗಿ ರಜೆ ನೀಡುವವರೆಗೂ ಶಾಲಾ ಆವರಣದಿಂದ ತೆರಳುವುದಿಲ್ಲ ಎಂದು ಪಟ್ಟುಹಿಡಿದು ದಸರಾ ರಜೆಗೆ ಆಗ್ರಹಿಸಿದರು.
ಕ್ರಿಸ್ಮಸ್ ಗೆ ಹತ್ತು ದಿನ ರಜೆ ದಸರಾ ಹಬ್ಬಕ್ಕೆ ಯಾಕಿಲ್ಲ ?
ಕ್ರಿಸ್‌ಮಸ್ ಹಬ್ಬಕ್ಕೆ ಹತ್ತು ದಿನಗಳವರೆಗೆ ರಜೆ ನೀಡುವ ಈ ಶಾಲೆಯು ಬಹುತೇಕ ಹಿಂದೂಗಳೇ ಓದುತ್ತಿರುವುದರಿಂದ ದಸರಾ ಹಬ್ಬಕ್ಕೆ ಯಾಕೆ ರಜೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಈ ರೀತಿಯ ತಾರತಮ್ಯ ಸರಿಯಲ್ಲ, ಸರ್ಕಾರಿ ಖಾಸಗಿ ಶಾಲೆಗಳಲ್ಲಿ ದಸರಾಕ್ಕೆ ರಜೆ ನೀಡಿದ್ದಾರೆ. ಅದೇ ರೀತಿ ರಜೆ ನೀಡಬೇಕು. ಪಾಲಕರು ಶಾಲೆಗೆ ಬಂದ ಸಮಯದಲ್ಲಿ ವಿನಯದಿಂದ ಗೌರವಯುತವಾಗಿ ಅವರೊಂದಿಗೆ ಮಾತನಾಡಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸತೀಶ್ ಅದ್ದಡ ಆಗ್ರಹಿಸಿದರು.
ಸಂಸ್ಥೆ ಮುಖ್ಯಸ್ಥ ಸುನೀಲ್ ತೋಮಸ್ ಮಾತನಾಡಿ, ಮುಂದಿನ ದಿನದಲ್ಲಿ ಪರೀಕ್ಷೆಗಳು ಇರುವುದರಿಂದ ಮಕ್ಕಳಿಗೆ ರಜೆ ನೀಡಿಲ್ಲ. ಪ್ರಾಚಾರ್ಯರ ಜತೆ ಚರ್ಚಿಸಿ ತಿಳಿಸಿತ್ತೇನೆ ಎಂದರು. ಇದಕ್ಕೆ ಒಪ್ಪದ ಪಾಲಕರು ಕೂಡಲೇ ರಜೆ ನೀಡಬೇಕು. ಇಲ್ಲದಿದ್ದರೆ ತೆರಳುವುದಿಲ್ಲ ಎಂದು ಪಟ್ಟುಹಿಡಿದರು. ಪಾಲಕರ ಒತ್ತಡಕ್ಕೆ ಮಣಿದ ಸುನೀಲ್ ತೋಮಸ್ ಅಕ್ಟೋಬರ್ 2ರಿಂದ 6 ರವರೆಗೆ ರಜೆ ನೀಡಿದರು, 8ರವರೆಗೆ ರಜೆ ನೀಡುವ ಕುರಿತು ಒಂದು ದಿನದಲ್ಲಿ ತಿಳಿಸುತ್ತೇನೆ ಎಂದು ಪೋಷಕರ ಮನವೊಲಿಸಿದರು.
ಈ ಸಮಯದಲ್ಲಿ ಸುರೇಶ್, ಬಜರಂಗದಳದ ರಾಕಿ ಹಿರೇಕೊಡಿಗೆ, ಸುಬ್ರಮಣ್ಯ ಶೆಟ್ಟಿ, ರಾಘವೇಂದ್ರ ಭಟ್, ಸುರೇಶ್ ಹೊಸೂರು, ಅನೂಪ್ ನಾರ್ವೆ, ಸತ್ಯಜಿತ್, ರಮೇಶ್ ಶೆಟ್ಟಿ, ಸತೀಶ್ ಅದ್ದಡ, ನರೇಂದ್ರ, ಕಿರಣ್ ಮಡಬಳ್ಳಿ,ಡಾ. ಶೋಭಾ, ಮಂಗಳಾ ಪ್ರವೀಣ್, ಸುಮಾ, ಪಪಂ ಅಧ್ಯಕ್ಷ ಇದಿನಬ್ಬ ಸೇರಿದಂತೆ ಇತರರಿದ್ದರು.









0 Comments