ದೇಶದ ಪ್ರತಿಯೊಬ್ಬ ಯುವಕರೂ ನನ್ನ ಮತ ಮಾರಾಟಕ್ಕಿಲ್ಲ ಆಂದೋಲನ ಆರಂಭಿಸುವ ಮೂಲಕ ಪ್ರಜಾಪ್ರಭುತ್ವ ಉಳಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಕರಿಗೆ ಕರೆ ನೀಡಿದರು.

ಯುವಕರು ದೇಶದ ನಾಯಕತ್ವಕ್ಕೆ ಹಾಗೂ ಉತ್ತಮ ಪ್ರಗತಿಗೆ ಬುನಾದಿಯಾಗಬೇಕು. ಪ್ರಜಾಪ್ರಭುತ್ವವನ್ನು ಉಳಿಸುವ ಕಾರ್ಯದಲ್ಲಿ ಯುವಕರು ನನ್ನ ಮತ ಮಾರಾಟಕ್ಕಿಲ್ಲ ಎಂಬ ಆಂದೋಲನದಲ್ಲಿ ರೂವಾರಿಗಳಾಗಿ ಸಮಾಜವನ್ನು ಉತ್ತಮ ಪಥದತ್ತ ಕೊಂಡೊಯ್ಯುವಲ್ಲಿ ಹೆಜ್ಜೆ ಹಾಕಬೇಕು ಎಂದರು. 


ಚುನಾವಣಾ ಸುಧಾರಣಾ ಕ್ರಮಗಳ ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಅವರು, ಆದರ್ಶ ಮೌಲ್ಯಗಳ ರಕ್ಷಣೆ ಕೇವಲ ಶಾಸಕಾಂಗಕ್ಕೆ ಮಾತ್ರ ಸೀಮಿತವಲ್ಲ, ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯೂ ಇದೆ. ಈ ಕಾರ್ಯ ನಡೆಯದಿದ್ದರೆ ಮೌಲ್ಯಗಳು ಅಧಃಪತನದತ್ತ ಸಾಗುತ್ತವೆ ಎಂದು ಎಚ್ಚರಿಸಿದರು. 

ಯುವಕರು ದೇಶದ ಭವಿಷ್ಯ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರೂ ಆಗಬೇಕು. ಇಲ್ಲದಿದ್ದರೆ ನಿಮ್ಮ ಬದುಕು ಅಂಧಕಾರವಾಗುತ್ತದೆ ಎಂಬ ಎಚ್ಚರಿಕೆ ನೀಡಿದರು. ಜನಾಂದೋಲನ ಪ್ರಾರಂಭವಾಗಬೇಕು. ನನ್ನ ಮತ ಮಾರಾಟಕ್ಕಿಲ್ಲ ಎಂಬ ಆಂದೋಲನ ಆರಂಭಿಸಿ. ನಾವು ಹಣ ಕೊಟ್ಟರೂ ಬೇಡ ಎನ್ನಬೇಕು. ಈ ವಿಷಯದಲ್ಲಿ ಎಲ್ಲಿಯತನಕ ಯುವಕರಲ್ಲಿ ಜಾಗೃತಿ ಬರುವುದಿಲ್ಲವೋ ಅಲ್ಲಿಯ ತನಕ ಸುಧಾರಣೆ ಅಸಾಧ್ಯ ಎಂದರು.


ಬ್ರಿಟಿಷರು ಬಿಟ್ಟು ಹೋದ ಕಾರ್ಯಾಂಗದ ಫೈಲ್‌ನಲ್ಲಿ ಕೊಕ್ಕೆ ಹಾಕಿ ಕಳಿಸುತ್ತಾರೆ, ಅಲ್ಲಿ ಜಡತ್ವ ಇದೆ, ಅದೇ ರೀತಿ ಪತ್ರಿಕಾ ರಂಗ ಹೇಗಿದೆ, ಯಾವ ಪತ್ರಿಕೆಯಲ್ಲಿ ಯಾವ ಸುದ್ದಿ ಬರುತ್ತದೆ, ಏಕೆ ಅಲ್ಲಿಯೂ ಆದರ್ಶ ಪಾಲನೆಯಾಗುತ್ತಿಲ್ಲ ಎಂಬ ಆತ್ಮಾವಲೋಕನ ಅಗತ್ಯ ಎಂದರು.

ಹಣ ಹೆಂಡ ಜಾತಿಯ ಬಲದಿಂದ ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯವೇ ? 

ವೈದ್ಯರು, ವ್ಯಾಪಾರಸ್ಥರು ಮಾನವೀಯ ಮೌಲ್ಯ ಉಳಿಸಿಕೊಂಡಿದ್ದಾರೆಯೇ? ನಮ್ಮ ಶಿಕ್ಷಣ ಪಾಶ್ಚಿಮಾತ್ಯೀಕರಣಗೊಂಡಿದೆ, ಭಾರತ ವಿರೋಧಿ ಶಕ್ತಿ ಬೆಳೆಯುತ್ತಿದ್ದರೆ ಅದರ ಜತೆ ಕೈ ಜೋಡಿಸುವ ಶಕ್ತಿಗಳಿಗೆ ಏನೆನ್ನಬೇಕು? ಹಣ, ತೋಳ್ಬಲ, ಹೆಂಡ, ಜಾತಿ, ಆಮಿಷವಿದ್ದರೇನೇ ಚುನಾವಣೆ ಗೆಲ್ಲಲು ಸಾಧ್ಯವೇ? ಪದವೀಧರ ಚುನಾವಣೆಯಲ್ಲೂ ರೊಕ್ಕ ಪಡೆದು ಮತ ಹಾಕಲಿಲ್ಲವೇ? ಇನ್ನು ಸುಶಿಕ್ಷಿತರಾದರೆ ಏನು ಪ್ರಯೋಜನ ಬಂತು? ಪ್ರಜಾಪ್ರಭುತ್ವ ಮೌಲ್ಯ ಎಲ್ಲಿದೆ? ಎಂಬ ಗಂಭೀರ ಪ್ರಶ್ನೆಗಳನ್ನು ಮಾಡಿದರು. ನಿಷ್ಪಕ್ಷಪಾತ ಚುನಾವಣೆ, ಪರಿಶುದ್ಧ, ನ್ಯಾಯಸಮ್ಮತವಾಗಿ ನಡೆಸಲು ಜನರು ಜಾಗೃತರಾಗಬೇಕು. ಇದಕ್ಕೆ ಚುನಾವಣಾ ಆಯೋಗ ಮುಂದಾಳತ್ವವಹಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.