ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗೋಶಾಲೆ ಹಾಗೂ ದೇವಾಲಯದ ನಿರ್ಮಾಣಕ್ಕೆ ಭೂಮಿ ನೀಡಿ ತನ್ಮೂಲಕ ತಾನೊಬ್ಬ ಮುಸಲ್ಮಾನ ಆದರೂ ಕೂಡ ಧರ್ಮಗಳ ನಡುವೆ ಬಾಂಧವ್ಯವನ್ನು ಬೆಸೆಯುವ ಸಲುವಾಗಿ ನಾಸೀರ್ ಎಂಬ ಮುಸಲ್ಮಾನ ಸಮುದಾಯದ ವ್ಯಕ್ತಿ ಗೋಶಾಲೆಗೆ ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ದಾನದ ರೂಪದಲ್ಲಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಶುಕ್ರವಾರ ಸಮರ್ಥನ ಎಂಬ ಟ್ರಸ್ಟ್ ಗೆ ಮೊಹಮ್ಮದ್ ನಾಸಿರ್ ಉದ್ದಿನ್‌ರವರು ದಾನವಾಗಿ ನೀಡಿದ ಭೂಮಿಯಲ್ಲಿ ಪಂಚಮುಖಿ ಆಂಜನೇಯ ದೇವಾಲಯ ಮತ್ತು ಗೋಶಾಲೆ ನಿರ್ಮಾಣಕ್ಕಾಗಿ ಭೂಮಿ ಪೂಜೆ ಕಾರ್ಯ ನಡೆಯಿತು.
ಇದನ್ನೂ ಓದಿ: Fact Check: ಚಿಕ್ಕಮಗಳೂರಿನಲ್ಲಿ ಇದ್ದಾನೆಯೇ ಮಕ್ಕಳ ಕಳ್ಳ? ಭಾರೀ ವೈರಲ್ ಆಗುತ್ತಿರುವ ಸ್ಟೇಟಸ್ ನ ಅಸಲಿಯತ್ತು ತಿಳಿಯಿರಿ
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ರವರು ಮಾತನಾಡಿ ಸಮಾಜಮುಖಿ ಕಾರ್ಯಕ್ಕೆ ಜಾತಿ ಮತಗಳ ಭೇದವಿಲ್ಲ ಮಹಮ್ಮದ್ ನಾಸಿರುದ್ದೀನ್ ಕುಟುಂಬದ ಈ ಸೇವೆಯಿಂದ ಭಗವಂತನ ಆಶೀರ್ವಾದ ನಾಡಿನ ಜನತೆಗೆ ಸಿಗಲಿ, ನಾಡಿನಲ್ಲಿ ಶಾಂತಿ ಸೌಹಾರ್ದತೆ ಶಾಶ್ವತವಾಗಿ ಉಳಿಯಲಿ ಎಂದು ಆಶಿಸಿ ನಾಸಿರ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ದಾನಿಗಳಾದ ಮೊಹಮ್ಮದ್ ನಾಸಿರುದ್ದೀನ್ ಮಾತನಾಡಿ, ಸಂತೋಷ ಹೆಬ್ಬಾರ್ ಗುರೂಜಿ ಅವರನ್ನು ನಾನು ಬಾಲ್ಯದಿಂದ ಗಮನಿಸುತ್ತಿದ್ದೆ. ಅವರು ಬುದ್ಧಿಮಾಂದ್ಯ ಮಕ್ಕಳಿಗೆ ನೀಡುತ್ತಿರುವ ನಿಸ್ವಾರ್ಥ ಸೇವೆ ನನ್ನ ಗಮನ ಸೆಳೆದಿದೆ, ತಾಯಿ ಹಾಲಿನ ನಂತರ ನಾವು ಕುಡಿಯುವುದೇ ಗೋವಿನ ಹಾಲು ಈ ಗೋವುಗಳನ್ನು ಸಂರಕ್ಷಿಸಲು ಮುಂದಾಗಿರುವ ಇವರ ಕಾರ್ಯಕ್ಕೆ ಕೈಜೋಡಿಸಲು ನಿರ್ಧಾರ ಮಾಡಿ ಭೂಮಿಯನ್ನು ದಾನ ಮಾಡಿದ್ದೇನೆ ಸಮಾಜಸೇವೆಗಾಗಿ ಭೂಮಿ ಮಾತ್ರವಲ್ಲದೆ ನನ್ನ ಜೀವವನ್ನು ಬೇಕಾದರೂ ಕೊಡುತ್ತೇನೆ, ಸಮರ್ಥನ ಟ್ರಸ್ಟ್ ನ ಎಲ್ಲಾ ಸಮಾಜಮುಖಿ ಕೆಲಸಗಳಿಗೂ ನನ್ನ ಸಹಕಾರವಿದೆ ಎಂದರು.
ಟ್ರಸ್ಟ್ ನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ (ಬಣಕಲ್)ಅವರು ಮಾತನಾಡಿ ಗುರುಕುಲ ಪ್ರಾರಂಭವಾಗಿ 15 ವರ್ಷಗಳು ಕಳೆದಿದೆ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಆದ್ದರಿಂದ ಬಡವರಿಗೆ ಅನುಕೂಲವಾಗಲೆಂದು ಸಮರ್ಥನ ಟ್ರಸ್ಟ್ ನ್ನು ಪ್ರಾರಂಭ ಮಾಡಿದ್ದು ಅಚ್ಚರಿ ಎಂಬಂತೆ ಗೋಶಾಲೆ, ದೇವಾಲಯ ನಿರ್ಮಾಣ, ಬುದ್ಧಿಮಾಂಧ್ಯ ಮಕ್ಕಳ ಪೋಷಣೆ, ಗುರುಕುಲ ಸೇರಿದಂತೆ ವೃದ್ಧಾಶ್ರಮ ನಿರ್ಮಾಣದಂತಹ ದೊಡ್ಡ ಕನಸಿಗೆ ನಾಸಿರುದ್ದೀನ್ ಅವರು ನಮ್ಮ ಟ್ರಸ್ಟ್ ಗೆ ಕೈಜೋಡಿಸಿ ಕೊಟ್ಯಾಂತರ ರೂಪಾಯಿಯ ಭೂಮಿದಾನ ಮಾಡಿರುವುದು ನಿಜಕ್ಕೂ ಮರೆಯಲಾಗದ ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಸಮರ್ಥಣ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸಂತೋಷ್ ಹೆಬ್ಬಾರ್ ಗುರೂಜಿ, ಮುಖ್ಯ ಅತಿಥಿಗಳಾಗಿ ಮಹೇಂದ್ರ ಮನೋಥ್, ಉಮಾದೇವಿ ಸರಫ್ ನಾಗರಾಜ್, ಪಿ.ಆರ್ ಅಮರನಾಥ್, ಎಸ್, ಆರ್ ಸತ್ಯ ನಾರಾಯಣ, ಪ್ರದೀಪ್ ಪೈ, ಸಿತಾರಾ ಕಾಫಿ ಕ್ಯೂರಿಂಗ್‌ನ ಆಡಳಿತ ಮಂಡಳಿ, ಸಮರ್ಥನ ಟ್ರಸ್ಟ್ನ ಸದಸ್ಯರು ಮತ್ತು ಭಕ್ತ ವೃಂದ ಭಾಗವಹಿಸಿದ್ದರು.
ಧರ್ಮ ಧರ್ಮಗಳ ನಡುವೆ ಕಿಚ್ಚು ಹೊತ್ತಿ ಅನೇಕ ಅಭಿಯಾನಗಳು, ತಮ್ಮ ತಮ್ಮ ಧರ್ಮವೇ ಶ್ರೇಷ್ಠ ಎಂಬ ವಾದಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಈ ಸಮಯದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬಾಳಬೇಕು, ಹಿಂದೂ ಮುಸ್ಲಿಂ ಒಂದೇ ಎಂದು ಬಿಂಬಿಸುವ ಸಲುವಾಗಿ ಹಿಂದೂಗಳ ನಂಬಿಕೆಗೆ ಒತ್ತು ನೀಡಿ ಗೋಶಾಲೆಗೆ ಭೂಮಿ ನೀಡಿರುವುದು ವಿಶೇಷವಾಗಿದೆ.









0 Comments