ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವವು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಇಂದು ದೇವಿ ಗಜಲಕ್ಷ್ಮಿ ಅಲಂಕಾರದಲ್ಲಿ ಶೋಭಿಸುತ್ತಿದ್ದಾಳೆ. 

ಇಂದು ವಿಜಯದಶಮಿಯ ಪ್ರಯುಕ್ತ ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ದೇವಿಯು ಪದ್ಮದ ಮೇಲೆ ಕುಳಿತು ಅಕ್ಕಪಕ್ಕದಲ್ಲಿ ಎರಡು ಗಜಗಳಿಂದ ನಮಸ್ಕರಿಸಲ್ಪಡುತ್ತಾ, ಭಕ್ತಾದಿಗಳಿಗೆ ಮಂದಸ್ಮಿತ ವದನೆಯಾಗಿ ವರಗಳನ್ನು ಕರುಣಿಸುವ ಮಾತೆಯಾಗಿ ಕಂಗೊಳಿಸುತ್ತಿದ್ದಾಳೆ ಜಗನ್ಮಾತೆ ಶಾರದೆ. 


ಇಂದು ಶೃಂಗೇರಿಯ ಕಾಳಿಕಾಂಬ ದೇವಸ್ಥಾನಕ್ಕೆ ಸಂಜೆಯ ಬೀದಿ ಉತ್ಸವ ತೆರಳಲಿದ್ದು, ಅಲ್ಲಿನ ಬನ್ನಿ ಮಂಟಪಕ್ಕೆ ಹಾಗೂ ಕಾಳಿಕಾಮಾತೆಯ ದೇಗುಲದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಬನ್ನಿ ತರಲಾಗುವುದು. 

ನಾಳೆ ಗಜಲಕ್ಷ್ಮಿ ಅಲಂಕಾರದಲ್ಲಿ ದೇವಿಯ ಮಹಾರಥೋತ್ಸವ ಶೃಂಗೇರಿಯ ಭಾರತೀ ಬೀದಿಯಲ್ಲಿ ಜರುಗಲಿದ್ದು, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಹ ನಡೆಯಲಿದೆ. ವಿವಿಧ ಕಲಾ ತಂಡಗಳು, ಭಜನಾ ತಂಡಗಳು ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ.


ಶೃಂಗೇರಿ: ಗ್ರಾಮ ಭಾರತ್ ತಂಡದ ವತಿಯಿಂದ ಉಚಿತ ನೋಂದಣಿ ಶಿಬಿರ

ಗ್ರಾಮ ಭಾರತ್ ತಂಡದ ವತಿಯಿಂದ ಶೃಂಗೇರಿಯ ಭಾರತೀಬೀದಿ ರಸ್ತೆಯಲ್ಲಿನ ವಿದ್ಯಾವಿಹಾರ ಲಾಡ್ಜ್ ಮುಂಬಾಗ ಹಲವು ಸೇವೆಗಳ ಉಚಿತ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.

ಇಲ್ಲಿ ಸಾರ್ವಜನಿಕರು ಉಚಿತವಾಗಿ ಆಭಾ ಕಾರ್ಡ್, ಈ ಶ್ರಮ್ ಕಾರ್ಡ್, ಪಿಎಂ ಕಿಸಾನ್ - ಇ ಕೆವೈಸಿ, ಆಧಾರ್ - ಚುನಾವಣಾ ಗುರುತಿನ ಚೀಟಿ ಜೋಡಣೆ, ಹಿರಿಯ ನಾಗರಿಕರ ಕಾರ್ಡ್ ಹಾಗೂ ರಕ್ತದಾನಿಗಳ ನೋಂದಣಿಯ ಸೌಲಭ್ಯ ಪಡೆಯಬಹುದು.


ದಿನಾಂಕ 03 ಅಕ್ಟೋಬರ್ 2022ರಿಂದ 06 ಅಕ್ಟೋಬರ್ 2022ರವರೆಗೆ ಈ ಸೇವೆಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಭಾರತ್ ತಾಲೂಕು ಸಂಯೋಜಕ ಆದರ್ಶ ಕಾಂಚಿನಗರ ತಿಳಿಸಿದ್ದಾರೆ .

ಈ ಸಂದರ್ಭದಲ್ಲಿ ಸಂತೋಷ್ ಮೇಗೂರು, ನಿರಂಜನ್ ಶೃಂಗೇರಿ, ಅನಿರುದ್ಧ ಮಾನಗಾರು, ಅನಿರುದ್ಧ ಕೊರಡಕಲ್ಲು, ಅಭಿಲಾಷ್ ಮೆಣಸೆ, ರಂಜಿತ್ ಶೃಂಗೇರಿ ಇದ್ದರು.