ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೆಡೆ ಮಾರಕವಾದ ಎಲೆಚುಕ್ಕಿ ರೋಗ ತೋಟವನ್ನು ಬಾಧಿಸುತ್ತಿದ್ದರೆ ಇತ್ತ ಜಿಲ್ಲೆಯ ಕೆಲವೆಡೆ ಜಾನುವಾರುಗಳಲ್ಲಿ ಚರ್ಮಗಂಟು ಖಾಯಿಲೆ ಕಂಡುಬರುತ್ತಿದೆ. ರಾಜ್ಯದಾದ್ಯಂತ ಲಕ್ಷಾಂತರ ಜಾನುವಾರುಗಳು ಚರ್ಮಗಂಟು ಖಾಯಿಲೆಯಿಂದ ನರಳುತ್ತಿವೆ.

ಸಾವಿರಾರು ಅಮೃತ್‌ ಮಹಲ್‌, ಮಲೆನಾಡು ಗಿಡ್ಡ ತಳಿಯ ಹಸುಗಳನ್ನು ಹೊಂದಿರುವ ಕಾಫಿನಾಡಿನಲ್ಲಿ ಈ ರೋಗ ನಿಧಾನವಾಗಿ ಹರಡುತ್ತಿದೆ.

ಇದನ್ನೂ ಓದಿ: ಆನೆಗಳನ್ನು ಕಾಡಿಗಟ್ಟಲು ಹೋದ ಫಾರೆಸ್ಟ್ ಗಾರ್ಡ್ ಗಳನ್ನು ಬೆನ್ನಟ್ಟಿದ ಕಾಡಾನೆಗಳು


ಚರ್ಮಗಂಟು ರೋಗದ ಲಕ್ಷಣಗಳೇನು ?

ಜಾನುವಾರುಗಳಲ್ಲಿ ಅತಿಯಾಗಿ ಜ್ವರ ಕಾಣಿಸಿಕೊಳ್ಳುವುದು, ಕಣ್ಣುಗಳಲ್ಲಿ ನೀರು ಸೋರುವುದು, ಕಾಲುಗಳಲ್ಲಿ ನಿಶಕ್ತಿ, ಜೊಲ್ಲು ಸೋರುವುದು, ದೇಹದ ಎಲ್ಲಾ ಭಾಗಗಳಲ್ಲೂ ಗಂಟು ಕಾಣಿಸಿಕೊಳ್ಳುವುದು, ಹಸುಗಳು ಕುಂಟುತ್ತಾ ನಡೆಯುವುದು, ಈ ರೋಗದ ಲಕ್ಷಣಗಳಾಗಿದ್ದು ಇಂತಹ ಯಾವುದಾದರೂ ಲಕ್ಷಣಗಳು ಜಾನುವಾರುಗಳಲ್ಲಿ ಕಾಣಿಸಿಕೊಂಡರೆ ಕೂಡಲೇ ಹತ್ತಿರದ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ತೆರಳಿ ವೈದ್ಯರಿಗೆ ಮಾಹಿತಿ ನೀಡುವುದು ಸೂಕ್ತವಾಗಿದೆ.  

ಎಲ್ಲೆಲ್ಲಿ ಎಷ್ಟೆಷ್ಟು ಮೂಕಜೀವಿಗಳಿಗೆ ರೋಗಬಾಧೆ :

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 3,24,007 ಜಾನುವಾರುಗಳಿದ್ದು, ಈಗಾಗಲೇ 828 ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿದೆ. ಕಡೂರು ತಾಲೂಕಿನ 15 ಗ್ರಾಮಗಳಲ್ಲಿ 822 ಜಾನುವಾರುಗಳಲ್ಲಿ ರೋಗ ಕಂಡುಬಂದಿದೆ. ಚಿಕ್ಕಮಗಳೂರು ತಾಲೂಕಿನ 3 ಗ್ರಾಮಗಳಲ್ಲಿ 6 ಜಾನುವಾರುಗಳಲ್ಲಿ ರೋಗ ಪತ್ತೆಯಾಗಿದೆ. ಹಲವು ಹಸುಗಳು ಗುಣಮುಖವಾಗಿದ್ದರೆ. ಒಂದು ಹಸು ಸಾವನ್ನಪ್ಪಿದೆ.


ಚರ್ಮಗಂಟು ರೋಗದ ನಿಯಂತ್ರಣಾ ಕ್ರಮಗಳು: 

1. ರೋಗ ಬಾಧಿತ ಹಸುಗಳಿಂದ ಉಳಿದ ಹಸುಗಳನ್ನು ಬೇರ್ಪಡಿಸುವುದು.

2.ರೋಗ ಕಂಡುಬಂದ ಜಾನುವಾರುಗಳಲ್ಲಿ ಗ್ರಾಮದ ಐದು ಕಿ.ಮೀ. ಸುತ್ತಲಿನ ಗ್ರಾಮಗಳಿಗೆ ಲಸಿಕೆ ಪೂರೈಕೆ.

3.ರೋಗ ಲಕ್ಷಣದ ಹಸುಗಳ ಪ್ರತ್ಯೇಕತೆ ಉತ್ತಮ.

4.ರಾಸುಗಳ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಿಸುವುದು.

5.ಕೊಟ್ಟಿಗೆಯ ಶುಚಿತ್ವ ಕಾಪಾಡುವುದು.

6.ಉಣ್ಣೆ ನಿವಾರಣೆಗೆ ಒತ್ತು ನೀಡುವುದು,

7.ಗಾಯಕ್ಕೆ ಬೇವು, ಕೊಬ್ಬರಿ ಎಣ್ಣೆ ಬಳಕೆ ಉತ್ತಮ.

ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ಪ್ರಮಾಣ ಕಡಿಮೆ ಇದೆ. ರೋಗ ಬಾಧಿತ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಲಸಿಕೆ ಕೊರತೆಯ ಕಾರಣ ರೋಗ ಕಂಡು ಬಂದಿರುವ ಗ್ರಾಮಗಳ ಸುತ್ತಲಿನ ಹಳ್ಳಿಗಳಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.  

ಸಂಬಂಧಿಸಿದ ಅಧಿಕಾರಿಗಳು ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಯಂತ್ರಣಾ ಕ್ರಮಗಳನ್ನು ಕೈಗೊಂಡು ಜಾನುವಾರುಗಳಿಗೆ ರೋಗಗಳು ಹಬ್ಬದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಅಂತೆಯೇ ಜಾನುವಾರುಗಳ ಮಾಲೀಕರೂ ಸಹ ಅಧಿಕಾರಿಗಳು ಜಾನುವಾರುಗಳ ಕುರಿತು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ ಸಹಕರಿಸಬೇಕಿದೆ.