ಕಳಸ: (ನ್ಯೂಸ್ ಮಲ್ನಾಡ್ ವರದಿ) ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ರಾಜ್ಯ ಹೆದ್ದಾರಿಗಳ ಹದೆಗೆಟ್ಟ ರಸ್ತೆಗಳ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಗ್ರಾಮಸ್ಥರು ಕಳಸ ಪಟ್ಟಣದಲ್ಲಿ ರಸ್ತೆತಡೆ, ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖಾ ಇಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರವಾಸಿ ತಾಣ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುವುದೇ ಅತ್ಯಂತ ಕಠಿಣವಾಗಿದೆ, ವಾಹನಗಳ ಸ್ಥಿತಿಯಂತೂ ಹೇಳತೀರದಾಗಿದೆ ಇದಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಬೇಕು ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹ ವ್ಯಕ್ತಪಡಿಸಿದರು.
ಇದನ್ನೂ ಓದಿ: ತೀರ್ಥಹಳ್ಳಿ: ವ್ಯಕ್ತಿಯನ್ನು ಥಳಿಸಿ ಸಾವಿಗೀಡು ಮಾಡಿದ್ದ ನಾಲ್ವರ ಬಂಧನ
ಸಮರ್ಪಕ ವ್ಯವಸ್ಥೆಗಾಗಿ ಆಗ್ರಹಿಸಿದ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮೊಳಗಿನ ಆಕ್ರೋಶವನ್ನು ಹೊರಹಾಕಿದರು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಾದ್ಯಂತ ಹದಗೆಟ್ಟಿರುವ ರಸ್ತೆಯಿಂದ ಪ್ರಯಾಣಿಕರು ನಿತ್ಯವೂ ಸಂಕಷ್ಟದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಳೆಹೊಳೆ-ಕಳಸ-ಹೊರನಾಡು- ಕುದುರೆಮುಖ ಮಾರ್ಗದ ರಸ್ತೆಯೂ ಸಂಪೂರ್ಣ ಗುಂಡಿ ಬಿದ್ದಿರುವ ಬಗ್ಗೆ ಸ್ಥಳೀಯರು ಅಧಿಕಾರಿವರ್ಗ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಮುಖಂಡ ಬಿ.ವಿ ರವಿ ರೈ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಳಸ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಕೆ.ಎಂ.ರಸ್ತೆ ಮತ್ತು ಮುಖ್ಯ ರಸ್ತೆ ಸೇರುವ ಭಾಗದಲ್ಲಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಲೋಕೋಪಯೋಗಿ ಇಲಾಖಾ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಇಂಜಿನಿಯರ್ ನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಕಿರಿಯ ಇಂಜಿನಿಯರ್ ಸತೀಶ್ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸೇರಿದ್ದ ಪ್ರತಿಭಟನಾಕಾರರು ಇಂಜಿನಿಯರುಗಳ ವಿರುದ್ದ ಹರಿಹಾಯ್ದರು. ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಮುಖಂಡ ಬಿ.ವಿ.ರವಿ ರೈ ಇಂಜಿನಿರುಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಇಂಜಿನಿಯರುಗಳ ವರ್ತನೆಗೆ ಆಕ್ರೋಶಗೊಂಡ ಪ್ರತಿಭಟನಾಕಾರರು ತೀವ್ರವಾಗಿ ನಿಂದಿಸಿ ಮುಗಿಬಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಇಂಜಿನಿಯರುಗಳಿಗೆ ರಕ್ಷಣೆ ನೀಡಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಮಂಜುನಾಥ್ ಮಾತನಾಡಿ ಕಳಸ ಮುಖ್ಯ ರಸ್ತೆಗೆ 1 ಕೋಟಿ, ಕಳಸ-ಕುದುರೆಮುಖ ರಸ್ತೆಗೆ 4ಕೋಟಿ, ಹೊರನಾಡು-ಬಾಳೂರು ರಸ್ತೆಗೆ ಒಂದೂವರೆ ಕೋಟಿ, ಕಳಸ-ಮಾಗುಂಡಿ ರಸ್ತೆಗೆ 5 ಕೋಟಿ ಮಂಜೂರಾಗಿದ್ದು, ಆಯ್ಧ ಭಾಗಗಳಿಗೆ ಡಾಂಬರೀಕರಣ ಮಾಡುತ್ತೇವೆ.ಟೆಂಡರ್ ಕೂಡ ಆಗಿದೆ ಮಳೆಯ ಕಾರಣದಿಂದ ಕಾಮಗಾರಿ ಆರಂಬಿಸಲು ಸಾಧ್ಯವಾಗಲಿಲ್ಲ ಇನ್ನು ಎರಡು ದಿನದಲ್ಲಿ ರಸ್ತೆಗೆ ಜಲ್ಲಿ ಹಾಕುವ ಕೆಲಸ ಪ್ರಾರಂಭಿಸುತ್ತೇವೆ. ಬಿಸಿಲು ಹೆಚ್ಚಾದಾಗ ಡಾಂಬರೀಕರಣ ಮಾಡುತ್ತೇವೆ ಎಂದು ಖಚಿತ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಹೋರಾಟವನ್ನು ಹಿಂದಕ್ಕೆ ತೆಗೆದುಕೊಂಡರು, ದುರಸ್ಥಿ ಆಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತೀವ್ರತರಹದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.






0 Comments