ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆಯಲ್ಲಿ ಕಳೆದ ಕೆಲದಿನಗಳ ಹಿಂದಷ್ಟೇ ನಡೆದ ಜಮೀನು ಕುರಿತಾದ ಗಲಾಟೆಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕವಾಗಿ ಪತ್ರಕರ್ತನ ಹೆಸರನ್ನು ಸೇರಿಸಲಾಗಿದೆ, ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕೇವಲ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಹಾಗೂ ಮನೋಜ್ ಎಂಬುವವರ ನಡುವೆ ಜಮೀನು ವಿವಾದದ ವಿಚಾರವಾಗಿ ನಡೆದಿರುವ ಗಲಭೆ ಪ್ರಕರಣದಲ್ಲಿ ಪತ್ರಕರ್ತ ಯು.ಆರ್.ಶಿವಕಾಶಿ ಎಂಬುವರನ್ನು ಉದ್ದೇಶಪೂರ್ವಕವಾಗಿಯೇ ಸಿಲುಕಿಸಲಾಗಿದೆ ಈ ಕುರಿತು ಸೂಕ್ತರೀತಿಯ ತನಿಖೆ ಹಾಗೂ ಕ್ರಮ ಕೈಗೊಳ್ಳಬೇಕು. ಮೂಡಿಗೆರೆ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು ಪ್ರಕರಣದಲ್ಲಿ ಆರೋಪಿಯೆಂದು ಬಿಂಬಿಸಿರುವ ಯು.ಆರ್.ಶಿವಕಾಶಿ ಅವರು ಮೂಡಿಗೆರೆ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿದ್ದು, ರಾಜ್ಯ ಮಟ್ಟದ ದಿನಪತ್ರಿಕೆಯಲ್ಲಿ ಮೂಡಿಗೆರೆ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದಾರು ದಿನ ಭಾರೀ ಮಳೆಯಾಗುವ ಮುನ್ಸೂಚನೆ
ಗಲಭೆಯ ವೇಳೆ ಅವರು ಸ್ಥಳದಲ್ಲಿಯೇ ಇರುವುದಿಲ್ಲ, ಗಲಭೆ ನಡೆದ ಬಳಿಕ ಅವರು ತಮ್ಮ ಪತ್ನಿ ಶ್ರೀಗಂಧ ಅವರ ಜೊತೆ ಸ್ಥಳಕ್ಕೆ ತೆರಳಿ ಗಲಭೆತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಅವರ ಮಾವ ದುಗ್ಗಪ್ಪಗೌಡರನ್ನು ಸ್ವತಃ ಅವರೆ ಠಾಣೆಗೆ ಕರೆತಂದಿದ್ದಾರೆ. ಹೀಗಿದ್ದರೂ ಅವರ ಮೇಲೆ ದೂರು ದಾಖಲಿಸಲಾಗಿದೆ ಈ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಹಾಗೂ ತನಿಖೆ ನಡೆಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಒತ್ತಾಯಿಸಿದರು.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮೂಡಿಗೆರೆಗೆ ತಾವೇ ಖುದ್ದಾಗಿ ಭೇಟಿ ನೀಡಿ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಅನ್ಯಾಯವಾಗಿರುವವರಿಗೆ ನ್ಯಾಯ ದೊರಕಿಸುವ ಭರವಸೆ ನೀಡಿದರು.
ಮನವಿ ನೀಡುವ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮೊದಲಿಯಾರ್, ಕಾರ್ಯದರ್ಶಿ ಎಂ.ಬಿ.ಅಶೋಕ್, ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಸದಸ್ಯ ಕಲ್ಯಾಣ್‌ಕುಮಾರ್, ತಾಲೂಕು ಕಾರ್ಯದರ್ಶಿ ಆರ್.ಸುಂದರೇಶ್, ಮೂಡಿಗೆರೆ ಘಟಕದ ಅಧ್ಯಕ್ಷ ಎ.ಆರ್.ಉದಯಶಂಕರ್, ಸದಸ್ಯರಾದ ಉಮಾಶಂಕರ್, ಅಮರ್‌ನಾಥ್, ಪ್ರಸನ್ನ ಗೌಡಹಳ್ಳಿ, ಪ್ರಸನ್ನಕುಮಾರ್, ಪ್ರಸನ್ನ ತಳವಾರ, ಸಂತೋಷ್, ಪ್ರಕಾಶ್, ನಯನ ತಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.









0 Comments