ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ತೋಟದ ಕೆಲಸ ಮಾಡುವ ಕೃಷಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದಾಗಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತಾಗಿ ಆರೋಪ ಪ್ರತ್ಯಾರೋಪಗಳು ಸಹ ಕೇಳಿ ಬಂದಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕೂಲಿ ಕಾರ್ಮಿಕರು ನೀಡಿದ ದೂರಿನಲ್ಲೇನಿದೆ ?
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಹುಣಸೆಹಳ್ಳಿ ಪುರ ಗ್ರಾಮದ ಜಗದೀಶ ಗೌಡ ಎಂಬುವವರ ಕಾಫಿ ಎಸ್ಟೇಟ್ ಕೂಲಿ ಲೈನ್ ನಲ್ಲಿ ಎಸ್ಟೇಟ್ ಮಾಲೀಕ ಜಗದೀಶ ಗೌಡ ಮತ್ತು ಅವರ ಮಗ ತಿಲಕ್, ಕೂಲಿ ಕಾರ್ಮಿಕರಾದ ಅರ್ಪಿತಾ ಮತ್ತು ಆಕೆಯ ಗಂಡ ವಿಜಯ ರವರ ಮೇಲೆ ಹಲ್ಲೆ ಮಾಡಿ, ಮೊಬೈಲ್ ಫೋನ್ ಕಿತ್ತುಕೊಂಡಿದ್ದು ಗಲಾಟೆ ಬಿಡಿಸಲು ಬಂದ ರೂಪ ಮತ್ತು ಕವಿತಾ ರವರಿಗೂ ಸಹ ಬೈಯ್ದು ಹೊಡೆದಿದ್ದಾರೆ. ನಂತರ ಅರ್ಪಿತಾ ಮತ್ತು ಆಕೆಯ ಗಂಡ, ವಿಜಯ ರವರನ್ನು ಕೂಲಿ ಲೈನ್ ನಲ್ಲಿ ಕೂಡಿ ಹಾಕಿ ಅರ್ಪಿತಾ ರವರಿಗೆ ಹೊಟ್ಟೆ ನೋವು ಆಗಿದ್ದರಿಂದ ಕಡಬಗೆರೆ ಖಾಸಗಿ ಆಸ್ಪತ್ರೆಗೆ ಜಗದೀಶ ರವರ ಜೀಪಿನಲ್ಲಿಯೇ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅರ್ಪಿತಾ ರವರು ಮೂಡಿಗೆರೆ ಆಸ್ಪತ್ರೆಯಲ್ಲಿ ತೋರಿಸಿ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದೆ.
ಸುಮಾರು 15 ದಿನಗಳ ಹಿಂದೆ ಅರ್ಪಿತಾ ಗಂಡನ ಸಂಬಂಧಿ ಸತೀಶ ಮತ್ತು ಮಂಜು ಅವರಿಗೆ ಅಲ್ಲಿಯೇ ಪಕ್ಕದ ಮನೆಯವರಿಗೆ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿದ್ದ ಸಂದರ್ಭದಲ್ಲಿ ಎಸ್ಟೇಟ್ ಮಾಲೀಕ ಜಗದೀಶ ಗೌಡ ರವರು ಮಂಜು ಮೇಲೆ ಹಲ್ಲೆ ಮಾಡಿದ್ದು, ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದಾಗ, ಎಸ್ಟೇಟ್ ಮಾಲೀಕ ಜಗದೀಶ ಗೌಡ ರವರು ನೀಡಿದ ಸಾಲದ ಹಣ ಕೊಟ್ಟು ಬೇರೆ ಕಡೆ ಹೋಗಿ ಎಂದು ತಿಳಿಸಿದ್ದು. ಹಣವನ್ನು ಹೊಂಚಿಕೊಂಡು ಬರಲು ಮಂಜು ಮತ್ತು ಸತೀಶ ರವರು ಬೇರೆ ಎಸ್ಟೇಟ್ ಗೆ ಹೋಗಿದ್ದ ಸಂದರ್ಭದಲ್ಲಿ
ಅರ್ಪಿತಾ ನೀಡಿದ ದೂರಿನ ಅನ್ವಯ ಎಸ್ಟೇಟ್ ಮಾಲೀಕ ಜಗದೀಶ ಗೌಡ ಮತ್ತು ಅವರ ಮಗ ತಿಲಕ್ ರವರ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕರು ನೀಡಿದ ದೂರು ಸತ್ಯಕ್ಕೆ ದೂರ, ಕಾರ್ಮಿಕರೇ ಮಾಲೀಕನನ್ನು ಬ್ಲಾಕ್ ಮೇಲ್ ಮಾಡಿದ್ದಾರೆ :
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿಕರಾದ ಹಾಗೂ ಸ್ಥಳೀಯರಾದ ಗೌರಿಗಂಡಿ ಚಂದ್ರಶೇಖರ್, 13 ಜನ ಕೆಲಸಕ್ಕೆ ಬರುತ್ತೇವೆಂದು ಮಾಲೀಕರ ಬಳಿ 9 ಲಕ್ಷ ಸಾಲ ತೆಗೆದುಕೊಂಡು ಲೈನ್ ಸೇರಿರುತ್ತಾರೆ. ಲೈನ್ ಸೇರಿದ ಮೇಲೆ ಒಂದೂವರೆ ತಿಂಗಳು ಕೆಲಸಕ್ಕೆ ಬಂದಿರುವುದಿಲ್ಲ, ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುತ್ತಾರೆ.
ಕೆಲಸಕ್ಕೆ ಕರೆದ ತೋಟದ ಮಾಲೀಕನಿಗೆ ಬೇಜವಾಬ್ದಾರಿಯಿಂದ ಮಾತನಾಡಿ ಮುಂಚಿತವಾಗಿಯೇ ಆತನ ವಿರುದ್ಧ ಪಿತೂರಿ ನಡೆಸಿ ಮಾಲೀಕನನ್ನು ಪ್ರಚೋದಿಸಿ ಚಿತ್ರೀಕರಿಸಿ, ಆ ವೀಡಿಯೋ ವನ್ನಿಟ್ಟುಕೊಂಡು ಆತನಿಗೆ ಬೆದರಿಕೆ ಹಾಕಿ ಹಣ ಗುಳುಂ ಮಾಡೋಕೆ ತಯಾರಿ ನಡೆಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೇ ಬ್ಲಾಕ್ ಮೇಲ್ ಮಾಡಿದಾಗಲೂ ಜಗದೀಶ್ ಗೌಡ ಅವರು ಬಗ್ಗದಿದ್ದಾಗ ಕಂಪ್ಲೇಂಟ್ ದಾಖಲು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಾರ್ಮಿಕರ ಗ್ಯಾಂಗ್ ಕೆಲಸವನ್ನು ಮಾಡದೆ, ರೋಲ್ ಕಾಲ್ ಮಾಡುವವರು ಎಂದೂ ಹೇಳಿದ್ದು ಈ ಕುರಿತು ತನಿಖೆ ನಡೆಸಿ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಬಡವರೆಲ್ಲ ಒಳ್ಳೆಯವರು, ಶ್ರೀಮಂತರೆಲ್ಲ ಕೆಟ್ಟವರು ಎಂಬುವ ಗ್ರಹಿಕೆಯಿಂದ ಹೊರಬರುವ ಅಗತ್ಯವಿದೆ. ಇಲ್ಲಿ ಕಾರ್ಮಿಕರ ಮುಖವಾಡ ಹಾಕಿದ ಕಳ್ಳರಿಂದ ಕಾಫಿ ತೋಟದವರಿಗೆ ವಂಚನೆ ಆಗಿದೆ ಎಂಬುದಾಗಿಯೂ ತಿಳಿಸಿದರು. ಘಟನಾ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಕೂಲಂಕುಷವಾಗಿ ಈ ಸಂಬಂಧ ಪರಿಶೀಲನೆ ನಡೆಸಿ ತಪ್ಪೆಸಗಿದವರ ವಿರುದ್ದ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ.








0 Comments