ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)  ಸರ್ಕಾರ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಾದ ಕೆಲಸವೊಂದನ್ನು ಸಮಾಜಮುಖಿ ಟ್ರಸ್ಟ್ ಒಂದು ಮಾಡಿ ತೋರಿಸಿದೆ.

ಸರ್ಕಾರಿ ಶಾಲೆಯ ಕುರಿತು, ಹಾಗೂ ಕನ್ನಡದ ಬಗ್ಗೆ ಬಾಷಣ ಮಾಡುವವರೇ ಹೆಚ್ಚು ಹೊರತು ಅವುಗಳಿಗಾಗಿ ನಿಸ್ವಾರ್ಥದಿಂದ ಕೆಲಸ ಮಾಡುವವರು ಕಡಿಮೆ. ಸಮರ್ಪಣ ಚಾರಿಟೆಬಲ್ ಟ್ರಸ್ಟ್ ರಿ ಈ ಒಂದು ತಂಡ ಕಳೆದ ಕೆಲವು ವರ್ಷಗಳಿಂದ ಮಲೆನಾಡಿನ ಭಾಗದಲ್ಲಿ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ, ಈಗ ಮಲೆನಾಡಿನ ಚಿಕ್ಕಮಗಳೂರಿನ ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಶೃಂಗೇರಿ ಖಾಂಡ್ಯ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ.


ಟ್ರಸ್ಟ್ ನ ಟ್ರಸ್ಟಿ ಗಣೇಶ್ ಕಾಮತ್ ಅವರ ಆರ್ಥಿಕ ಸಹಾಯದ ಮೂಲಕ ಬಾಳೆಹೊನ್ನೂರು, ನರಸಿಂಹರಾಜಪುರ, ಕೊಪ್ಪ, ಖಾಂಡ್ಯ ಹಾಗೂ ಶೃಂಗೇರಿ ಭಾಗದ ಒಟ್ಟು 82 ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್ ನೀಡುವ ಕಾರ್ಯವನ್ನು ಈ ಸಂಸ್ಥೆ ಮಾಡಿದೆ.

ಈ ಮೂಲಕ ಶೃಂಗೇರಿ, ಕೊಪ್ಪ ಹಾಗೂ ನರಸಿಂಹರಾಜಪುರ ವ್ಯಾಪ್ತಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ದೊರೆತಿದೆ.

ಈ ಯೋಜನೆಯ ಹಸ್ತಾಂತರ ಕಾರ್ಯಕ್ರಮವನ್ನು ಬಾಳೆಹೊನ್ನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆಸಲಾಯಿತು. ಒಟ್ಟಾರೆ 44 ಶಾಲೆಗಳಿಗೆ ಎಲೆಕ್ಟ್ರಿಕ್ ವಾಟರ್ ಪ್ಯೂರಿಫಯರ್ ಹಾಗೂ 38 ಶಾಲೆಗಳಿಗೆ ಸ್ಟೀಲ್ ವಾಟರ್ ಫಿಲ್ಟರ್ ನೀಡಲಾಯಿತು. ಹಾಗೆಯೇ ಇದೇ ಸಂದರ್ಭದಲ್ಲಿ ಕೊಪ್ಪದ ಸರ್ಕಾರಿ ಶಾಲೆಗೆ ಹತ್ತು ಸಾವಿರ ಮೌಲ್ಯದ ಪುಸ್ತಕಗಳು ಹಾಗೂ ಬುಕ್ಸ್ ರ್ಯಾಕ್ ಅನ್ನು ನೀಡಲಾಯಿತು.


ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ನಿವೃತ್ತ ಶಿಕ್ಷಕರಾದ ಶ್ರೀಯುತ ಟಿ.ಆರ್. ನಾಗಪ್ಪ ಗೌಡ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮರ್ಪಣ ಟ್ರಸ್ಟ್ ನ ಶ್ರೀಮತಿ ದೀಪಾ ಶೆಟ್ಟಿ ಅವರು ವಹಿಸಿದ್ದರು, ಹಾಗೆಯೇ ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಕೊಟ್ರೇಶಪ್ಪ ಅವರು, ಹಾಗೂ ಅತಿಥಿಗಳಾಗಿ ಪತ್ರಕರ್ತರಾದ ಸತೀಶ್ ಜೈನ್ ಹಾಗೂ ಸಂದೀಪ್ ಶೆಟ್ಟಿ ಅವರು ಉಪಸ್ಥಿತರಿದ್ದರು.


ಪಾರದರ್ಶಕ ಆಯ್ಕೆ - ಯಾವ ಶಾಲೆಗಳಿಗೆ ಸೌಲಭ್ಯ ನೀಡಬೇಕು, ಎಲೆಕ್ಟ್ರಿಕ್ ಪ್ಯೂರಿಫಯರ್ ಯಾವ ಶಾಲೆಗೆ, ಸ್ಟೀಲ್ ಫಿಲ್ಟರ್ ಯಾವ ಶಾಲೆಗೆ ನೀಡಬೇಕು ಎಂಬ ಕುರಿತು ಆಯ್ಕೆ ಮಾಡುವಾಗ ತಂಡದ ಸದಸ್ಯರೇ ನೇರವಾಗಿ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಅದರ ಆಧಾರದ ಮೇಲೆ ಫಿಲ್ಟರ್ ವಿತರಣೆ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ತಂಡದ ಸದಸ್ಯರು ಈ ಕಾರ್ಯಕ್ಕಾಗಿ ಶ್ರಮಿಸಿದ್ದಾರೆ.

ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರಾದ ಅನಿಲ್, ರೋಹಿತ್, ರಮ್ಯ, ವಿಜಯ್, ದರ್ಶನ್, ರೋಹನ್, ರಚನ್, ಸ್ವಾತಿ, ಆದರ್ಶ, ಗಣೇಶ್, ಸುನೀಲ್, ರಂಜಿತ್, ರಮೇಶ್, ಕಾರ್ತಿಕ್, ನಿಖಿಲ್, ಸ್ವಸ್ತಿಕ್ ಹಾಗೂ ಶಾಲೆಯ ಶಿಕ್ಷಕಿ ರಮಿತಾ ಉಪಸ್ಥಿತರಿದ್ದರು.


ಸಮರ್ಪಣ ಚಾರಿಟೆಬಲ್ ಟ್ರಸ್ಟ್ ನಡೆದುಬಂದ ಹಾದಿ: 

ಬಲಗೈಯಲ್ಲಿ ದಾನ ಕೊಡು, ಅದು ಎಡಗೈಗು ತಿಳಿಯದ ಹಾಗೆ ಈ ನಾಣ್ನುಡಿಯಂತೆ ಸಮಾಜದಲ್ಲಿ ಯಾವುದೇ ಅಪೇಕ್ಷೆ ಹೊಂದಿರದೆ ದುಡಿಯುತ್ತಿರುವ ಸಂಸ್ಥೆ ಸಮರ್ಪಣ ಟ್ರಸ್ಟ್.

ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸುವ ಧ್ಯೇಯೋದ್ದೇಶಗಳೊಂದಿಗೆ 27ಅಕ್ಟೋಬರ್ 2016 ರಂದು ಸಮರ್ಪಣ ಟ್ರಸ್ಟ್(ಮುದರಂಗಡಿ)ಉಡುಪಿ ಮೂಲದ ಯುವ ಉದ್ಯಮಿ ಗಣೇಶ್ ಕಾಮತ್ ತಮ್ಮ ತಂದೆ ರತ್ನಾಕರ್ ಕಾಮತ್ ತಾಯಿ ಲಕ್ಷ್ಮೀ ಕಾಮತ್ ಇವರ ಸಹಕಾರದೊಂದಿಗೆ ಆರಂಭಿಸಿದರು.

ಸಮಾಜದ ಆರೋಗ್ಯ ಬಹಳ ಮುಖ್ಯ ಇದರಿಂದ ನಾಡು ಶಕ್ತಿಯಾಗಲು ಸ್ವಾಭಿಮಾನದಿಂದ ಎಲ್ಲರೂ ಬದುಕಲು ಸಾಧ್ಯ. ವೃದ್ಧರು ಅಂಗವಿಕಲರು ಅಬಲೆಯರು ಇಂಥವರಿಗೆ ಕೈಲಾದ ಸಹಾಯ ನೀಡುವ ಆಶಯ ಸಮರ್ಪಣ ಟ್ರಸ್ಟ್ ನದ್ದು.

2016-17 ರಲ್ಲಿ 90,000 ಸಾವಿರ ಆರಂಭಿಕ ಹಣದೊಂದಿಗೆ ಪ್ರಾರಂಭವಾದ ಸಮರ್ಪಣಾ ಟ್ರಸ್ಟ್ ಅದೇ ವರ್ಷ ನರಕ್ಕೆ ಸಂಬಂಧಪಟ್ಟ ಕಾಯಿಲೆ ಯಿಂದ ಬಳಲುತ್ತಿದ್ದ ವ್ಯಕ್ತಿಗೆ ಐವತ್ತು ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚವನ್ನು ಭರಿಸುವುದರೊಂದಿಗೆ ತನ್ನ ಮೊದಲ ಸಾಮಾಜಿಕ ಚಟುವಟಿಕೆ ಯನ್ನು ಆರಂಭಿಸಿತು.

ತದನಂತರ 2016ರಿಂದ2022ರವರೆಗೆ ಸಮರ್ಪಣಾ ನಡೆಸಿದ ಸಾಮಾಜಿಕ ಕಾರ್ಯಗಳು ಅದೆಷ್ಟೋ ಬಡ ಕುಟುಂಬಗಳ ಬಾಳಲ್ಲಿ ಬೆಳಕಾಗಿದೆ. ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಅಪಘಾತ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿದ್ದ ಉಡುಪಿ ಬೆಂಗಳೂರು ಬಾಳೆಹೊನ್ನೂರು ಶೃಂಗೇರಿ ಕೊಪ್ಪ ಎನ್ ಆರ್ ಪುರ ಭಾಗದ ಅದೆಷ್ಟೋ ಬಡ ಕುಟುಂಬಗಳ ಬಡಜನರಿಗೆ ಆಸರೆಯಾಗಿ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು ಸರಿಸುಮಾರು (23,925,18)ವೆಚ್ಚದ ವೈದ್ಯಕೀಯ ನೆರವನ್ನು ಸಮರ್ಪಣಾ ಟ್ರಸ್ಟ್ ಭರಿಸಿದೆ...!

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಅವರ ದೈಹಿಕ ಮಾನಸಿಕ ಆರೋಗ್ಯ ಬಹಳ ಮುಖ್ಯ ಇವರೆಲ್ಲಾ ದೇಶಕ್ಕೆ ರತ್ನಗಳಿದ್ದಂತೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಪುಸ್ತಕಗಳು,ಸಮವಸ್ತ್ರಗಳು,ಶಿಕ್ಷಣ ವೆಚ್ಚವನ್ನು ಒದಗಿಸುವುದಲ್ಲದೆ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಮಕ್ಕಳ ಕ್ರೀಡಾ ಚಟುವಟಿಕೆಗೆ ಉಪಯೋಗವಾಗುವಂತೆ ಹಲವು ರೀತಿಯ ಸಹಕಾರ ನೀಡಲಾಗಿದೆ 

ನಮ್ಮ ಸಮಾಜದಲ್ಲಿ ಅದೆಷ್ಟೋ ಮಕ್ಕಳು ತಂದೆ ತಾಯಿ ಇಲ್ಲದೆ ಅಥವಾ ಆರ್ಥಿಕ ಸಂಕಷ್ಟದಿಂದ ಶಿಕ್ಷಣವನ್ನು ಮೊಟಕುಗೊಳಿಸಿದ ಎಷ್ಟೋ ಉದಾಹರಣೆಗಳಿವೆ ಮೂಡಿಗೆರೆ ಭಾಗದ ಕುಟುಂಬವೊಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಓಲ ಟ್ಯಾಕ್ಸಿ ಓಡಿಸಿ ಜೀವನ ಸಾಗಿಸುತ್ತಿದ್ದ ಆ ಮನೆಯ ಆಧಾರಸ್ತಂಭ ಕರೋನ ಕಾಯಿಲೆಗೆ ತುತ್ತಾಗಿ ಅಕಾಲಿಕ ಮರಣವನ್ನಪ್ಪಿದ್ದಾರೆ ಆ ಮನೆಯ ಆಧಾರ ಸ್ತಂಭವೇ ಇಲ್ಲದಂತಾದಾಗ ಆ ತಾಯಿ ತನ್ನ ಮಗಳ ಶಿಕ್ಷಣದ ವೆಚ್ಚವನ್ನು ಭರಿಸಲಾಗದೆ ಹಲವಾರು ಕಡೆ ಸಹಾಯಕ್ಕಾಗಿ ಅಂಗಲಾಚಿದ್ದರು ಈ ವಿಚಾರ ಸಮರ್ಪಣ ತಂಡಕ್ಕೆ ತಿಳಿದ ಕೂಡಲೇ ಆ ಮಗುವಿನ ಶಿಕ್ಷಣಕ್ಕೆ ಸಮರ್ಪಣ ಟ್ರಸ್ಟ್ ನೆರವಾಗಿ ನಿಂತಿತ್ತು.


ಶೃಂಗೇರಿಯ ಕೂಲಿ ಕಾರ್ಮಿಕ ಓರ್ವರ ಪುತ್ರಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಸಂಧರ್ಭದಲ್ಲಿ ಟ್ರಸ್ಟ್ ನ ಸದಸ್ಯರೆಲ್ಲ ಒಂದಾಗಿ ಕೆಲಸ ಮಾಡಿ ಸುಮಾರು 4,75,000 ರೂಪಾಯಿಗಳ ವೈದ್ಯಕೀಯ ಸಹಾಯ ನೀಡಿರುತ್ತಾರೆ.

ಇದುವರೆಗೂ ಸಮರ್ಪಣಾ ಟ್ರಸ್ಟ್ ಶಿರಸಿ, ಉಡುಪಿ ,ಬೆಂಗಳೂರು, ಎನ್ ಆರ್ ಪುರ ಕೊಪ್ಪ ಶೃಂಗೇರಿ ಹೀಗೆ ಹಲವಾರು ಕಡೆ ನೂರಕ್ಕೂ ಹೆಚ್ಚು ಮಕ್ಕಳಿಗೆ 35 ಲಕ್ಷದಷ್ಟು ಹಣವನ್ನು ಶಿಕ್ಷಣಕ್ಕೆ ನೆರವಾಗುವಂತೆ ದೇಣಿಗೆಯನ್ನು ನೀಡಿದೆ.

2019ರಲ್ಲಿ ಮಲೆನಾಡು ಭಾಗದಲ್ಲಿ ಬಾಳೆಹೊನ್ನೂರು ಮಾಗುಂಡಿ, ಕಳಸ, ಮೂಡಿಗೆರೆ, ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಅದೆಷ್ಟೋ ಜನರ ಬದುಕನ್ನು ನರಕವಾಗಿಸಿತ್ತು ಅವರ ಬದುಕು ಅಕ್ಷರಶಃ ಮಳೆಗೆ ಕೊಚ್ಚಿ ಹೋಗಿತ್ತು ಅದೆಷ್ಟೋ ಜನರು ಮನೆ ಕಳೆದುಕೊಂಡು ಬೀದಿ ಪಾಲಾಗಿದ್ದರು ಇಂತಹ ಸಂಕಷ್ಟದ ಸಮಯದಲ್ಲಿ ಅವರಿಗೆ ಆಸರೆಯಾಗಿ ಹಲವು ಹೃದಯವಂತರ ಸಹಕಾರದೊಂದಿಗೆ ಸುಮಾರು 5,00,000 ರೂ ಹೆಚ್ಚಿನ ಮೊತ್ತದಲ್ಲಿ ಸಂತ್ರಸ್ತರಿಗೆ ಉಪಯೋಗವಾಗುವಂತೆ ಆಹಾರ ಸಾಮಗ್ರಿ , ಹಾಸಿಗೆ, ಬಟ್ಟೆ ,ಬೆಡ್ ಶೀಟ್, ಮೆಡಿಸಿನ್ , ಗ್ಯಾಸ್ ಸ್ಟವ್ ಇನ್ನಿತರ ಗೃಹೋಪಯೋಗಿ ಸಾಧನಗಳನ್ನು ಟ್ರಸ್ಟ್ ನೀಡಿತ್ತು. ಇದೆ ಸಮಯದಲ್ಲಿ ಮಡಿಕೇರಿ ಬಾಗದ ಜನರಿಗೂ 1 ಟನ್ ಅಕ್ಕಿಯನ್ನು ಕಳುಹಿಸುವ ಮೂಲಕ ನೆರವು ನೀಡಿದೆ.

ಕೊರೊನಾ ಎಂಬ ಮಹಾಮಾರಿ ವಕ್ಕರಿಸಿ ಇಡೀ ದೇಶವೇ ಲಾಕ್ ಡೌನ್ ಗೆ ಒಳಗಾಗಿತ್ತು ದಿನ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಎಷ್ಟೋ ಬಡ ಜನರ ಬದುಕನ್ನು ನರಕವಾಗಿಸಿತ್ತು…

ಅಕ್ಷರಶಃ ಇಡೀ ದೇಶವೇ ಸೂತಕದ ಮನೆಯಂತೆ ಆಗಿತ್ತು ಜನರು ಕಾಯಿಲೆಗೆ ಹೆದರಿ ಒಬ್ಬರಿಂದೊಬ್ಬರು ಅಂತರ ಕಾಯ್ದುಕೊಂಡಿದ್ದರು ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಸಮರ್ಪಣ ತಂಡದ ಸ್ವಯಂ ಸೇವಕರ ಕಾರ್ಯ ಎಂದಿಗೂ ಮರೆಯುವಂಥದ್ದಲ್ಲ 

ಹಲವು ಭಾಗಗಳಲ್ಲಿ ಸಂಕಷ್ಟಕ್ಕೆ ಒಳಗಾದ ಸುಮಾರು ನೂರೈವತ್ತಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ವಾಹನಗಳೇ ತೆರಳದ ಜಯಪುರ , ಕೊಪ್ಪ, ಸುತ್ತಮುತ್ತದ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ದುರ್ಗಮ ಹಾದಿಗಳಲ್ಲಿ ಕಾಲ್ನಡಿಗೆ ಯಲ್ಲಿ ತೆರಳಿ 5,00,000 ರೂ ವೆಚ್ಚದಲ್ಲಿ ಫುಡ್ ಡ್ರೈವ್ ನಡೆಸಿ ಎರಡು ತಿಂಗಳಿಗಾಗುವಷ್ಟು ದಿನಸಿ ಕಿಟ್ ಗಳನ್ನು ವಿತರಿಸಿದ್ದರು ಅದಲ್ಲದೆ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ಪೊಲೀಸ್ ಸಿಬ್ಬಂದಿಗಳಿಗೆ ,ಹೋಮ್ ಗಾರ್ಡ್ಸ್ ಗಳಿಗೆ ,ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಪಿಪಿ ಈ ಕಿಟ್,ಮಾಸ್ಕ್ , ಸ್ಯಾನಿಟೈಸರ್ ಗಳನ್ನು ವಿತರಿಸಿದ್ದರು.

ಕೊರೋನಾ ಮೊದಲನೇ ಅಲೆಯಲ್ಲಿ ನಮ್ಮ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಪ್ರಕರಣಗಳು ಬಂದಿರಲಿಲ್ಲ ಆದರೆ ಎರಡನೇ ಅಲೆ ಶುರುವಾದಾಗ ಮಲೆನಾಡು ಭಾಗವೂ ಕೂಡ ಕೊರೋನಾ ಎಂಬ ಮಹಾಮಾರಿಗೆ ತತ್ತರಿಸಿ ಹೋಗಿತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹಲವಾರು ಜನ ಮೃತಪಟ್ಟರು. ಮಲೆನಾಡು ಭಾಗಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇಲ್ಲ ಕೊರೋನಾ ಪೀಡಿತರಿಗೆ ಅಗತ್ಯವಾಗಿ ಬೇಕಾಗಿರುವಂತಹ ಆಕ್ಸಿಜನ್ ವ್ಯವಸ್ಥೆ ಇಲ್ಲಿನ ಆಸ್ಪತ್ರೆಗಳಲ್ಲಿ ಇರಲಿಲ್ಲ ಹಣ ಇರುವವರು ದೂರದ ಮಂಗಳೂರು ಶಿವಮೊಗ್ಗ ಇನ್ನಿತರ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಇಲ್ಲಿನ ಬಡವರಿಗೆ ಅದು ದೂರದ ಮಾತಾಗಿತ್ತು ಹಾಗಾಗಿ ಅಗತ್ಯವಾಗಿ ಬೇಕಾದಂತಹ ಆಕ್ಸಿಜನ್ ಕೊರತೆಯಿಂದ ಇಲ್ಲಿನ ಬಡ ಜನರು ಪರಿತಪಿಸುತ್ತಿರುವುದನ್ನು ಕಂಡು ಸಮರ್ಪಣಾ ತಂಡದ ಸದಸ್ಯರು ಹಾಗೂ ಬ್ಲೂಯಾಂಡರ್ ಕಂಪೆನಿಯ ಸದಸ್ಯರೂ ಆಗಿರುವ ದಿವ್ಯ ಶೆಟ್ಟಿ ಅವರು ತಮ್ಮ ಕಂಪನಿಯ ಸಿಎಸ್ ಆರ್ ಟೀಮ್ ನ ಸಹಕಾರದಿಂದ ಮಲೆನಾಡು ಭಾಗದ ಬಾಳೆಹೊನ್ನೂರು ಎನ್ ಆರ್ ಪುರ ಕೊಪ್ಪ ಶೃಂಗೇರಿ ಸರ್ಕಾರಿ ಆಸ್ಪತ್ರೆಗಳಿಗೆ ಶುಶ್ರೂಷೆಗೆ ತೆರಳುವ ಬಡ ಜನರಿಗೆ ಉಪಯೋಗವಾಗುವಂತೆ ಸುಮಾರು 11 ಲಕ್ಷ ರೂ ವೆಚ್ಚದಲ್ಲಿ 18 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ಒದಗಿಸಿಕೊಟ್ಟು ಹಲವಾರು ಕೋರೋನಾ ಪಿಡಿತ ರೋಗಿಗಳ ಜೀವ ಉಳಿಸುವ ಮಹತ್ತರ ಕಾರ್ಯ ಮಾಡಿತ್ತು ಇಂದಿಗೂ ಕೂಡ ಇದರ ಸದುಪಯೋಗ ಆಗುತ್ತಿದೆ...

ಕೊರೋನಾ ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಲವು ನಿರ್ಬಂಧಗಳನ್ನು ಸರ್ಕಾರ ಹೇರಿತ್ತು ಅದರಲ್ಲಿ ಶಿಕ್ಷಣ ಕ್ಷೇತ್ರವು ಒಂದಾಗಿತ್ತು ಇದರಿಂದ ಬೌದ್ಧಿಕ ತರಗತಿಗಳು ರದ್ದಾಗಿ ಶಿಕ್ಷಣ ವ್ಯವಸ್ಥೆ ಆನ್ ಲೈನ್ ಶಿಕ್ಷಣಕ್ಕೆ ಮೊರೆ ಹೋಗಿತ್ತು ಖಾಸಗಿ ಶಾಲೆಗಳು ಅವರಲ್ಲಿ ಅಗತ್ಯ ವ್ಯವಸ್ಥೆಗಳಿರುವುದರಿಂದ ಹೇಗೋ ಆನ್ ಲೈನ್ ಶಿಕ್ಷಣದ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತ ಬರುತ್ತಿತ್ತು ಆದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಆನ್ ಲೈನ್ ಶಿಕ್ಷಣದ ವ್ಯವಸ್ಥೆಯು ಕೂಡ ಸಮರ್ಪಕವಾಗಿ ಸಿಗುತ್ತಿರಲಿಲ್ಲ ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ನಡೆಸಲು ಬೇಕಾದಂತಹ ಬೋಧನೋಪಕರಣಗಳ ಕೊರತೆ ಇತ್ತು ಹಾಗಾಗಿ 

ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗಾಗಿ ಬ್ಲೂಯಾಂಡರ್ ಕಂಪೆನಿಯ ಸಹಯೋಗದೊಂದಿಗೆ ,ಎನ್ ಆರ್ ಪುರ ,ಶೃಂಗೇರಿ ,ಮೂಡಿಗೆರೆ, ಕೊಪ್ಪ ಹಾಗೂ ಕಳಸ ತಾಲ್ಲೂಕಿನ ಸುಮಾರು 25 ಸರ್ಕಾರಿ ಶಾಲಾ ಕಾಲೇಜಿಗೆ ಲ್ಯಾಪ್ ಟ್ಯಾಪ್ ಗಳನ್ನು ನೀಡಲಾಗಿತ್ತು 

ಈ ಪರಿಸರದ ಭಾಗವಾಗಿರುವ ಪ್ರಾಣಿ ಸಂಕುಲಗಳ ರಕ್ಷಣೆ ಕೂಡಾ ನಮ್ಮ ಗುರಿ ಪ್ರಾಣಿ ಸಂಕುಲಗಳಿಗೆ ಪ್ರೀತಿ ದಯೆ ತೋರುವುದು ಕೂಡ ನಮ್ಮ ಕರ್ತವ್ಯ ಇದರಲ್ಲಿ ಪರಿಸರದ ಆರೋಗ್ಯವೂ ಕೂಡ ಇದೆ ಇದರ ಭಾಗವಾಗಿ ಸಮರ್ಪಣಾ ಚಾರಿಟೆಬಲ್ ಟ್ರಸ್ಟ್ ಮಲೆನಾಡು ಭಾಗದಲ್ಲಿರುವ ಹಲವು ಗೋಶಾಲೆಗಳಿಗೆ ಅಗತ್ಯವಿರುವ ಮೇವು ಹಿಂಡಿ ನೀಡುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ…!

ಹಲವಾರು ಸರಕಾರಿ ಯೋಜನೆಗಳು ಬರೀ ಘೋಷಣೆಗಷ್ಟೇ ಸೀಮಿತವಾಗಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ,

ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಲ್ಲ ,ಗ್ರಂಥಾಲಯಗಳಿಲ್ಲ ,ಶಿಕ್ಷಕರ ಕೊರತೆ ,ಗುಣಮಟ್ಟದ ಶಿಕ್ಷಣದ ಕೊರತೆ 

ಇವೆಲ್ಲದರ ಕಾರಣ ಹಲವಾರು ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿ ಇವೆ ಹಾಗಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಸಮರ್ಪಣ ತಂಡ ಈಗಾಗಲೇ ಹಲವಾರು ಶಾಲೆಗಳಿಗೆ ಬೇಕಾದ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ, ಮಕ್ಕಳ ಕಲಿಕೆಗೆ ಸಹಾಯವಾಗುವಂತಹ ಕೆಲಸವನ್ನು ಮಾಡಿಕೊಂಡು ಬಂದಿದೆ..

ಇಲ್ಲಿಯವರೆಗೆ ಸುಮಾರು 29,78,000 ರೂಪಾಯಿಗಳನ್ನು ಶಿಕ್ಷಣ ಕ್ಷೇತ್ರಕ್ಕೂ ಸುಮಾರು 11,00,000 ಲಕ್ಷ ರೂಪಾಯಿಯನ್ನು ವೈದ್ಯಕೀಯ ನೆರವಿಗೂ ಹಾಗು ಸುಮಾರು 9,90,000 ರೂಪಾಯಿಗಳನ್ನು ಇನ್ನಿತರ ಸಾಮಾಜ ಸೇವೆಗಾಗಿ... ಹೀಗೆ ಒಟ್ಟಾರೆಯಾಗಿ ಸುಮಾರು 51,46,000 ರೂಪಾಯಿಗಳನ್ನು ಸಮಾಜಮುಖಿ ಕೆಲಸಗಳಿಗೆ ವಹಿಸಿದೆ.