ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಬ್ರಿಗೇಡ್ ಸಂಘಟನೆಯು ಅಧಿಕೃತವಾಗಿ ಭೂಮಿ ಹುಣ್ಣಿಮೆಯ ದಿನವಾದ ನಿನ್ನೆ ಧಾರ್ಮಿಕ ರೀತಿಯಲ್ಲಿ ಉದ್ಘಾಟನೆಗೊಂಡಿತು.
ಚಿಕ್ಕಮಗಳೂರು ನಗರದ ರಾಮ ಮಂದಿರದಲ್ಲಿ ಪೂಜೆಯನ್ನು ನೆರವೇರಿಸುವುದರ ಮೂಲಕ ಹಿಂದೂ ಬ್ರಿಗೇಡ್ - ಕರ್ನಾಟಕ ಸಂಘಟನೆಯು ಉದ್ಘಾಟನೆಗೊಂಡಿತು. ಈ ಕುರಿತು ಮಾತನಾಡಿದ ಹಿಂದೂ ಬ್ರಿಗೇಡ್ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಖಾಂಡ್ಯ, ಹಿಂದೂ ಧರ್ಮವು ಜಗತ್ತಿನ ಶ್ರೇಷ್ಠ ಧರ್ಮವಾಗಿದ್ದು, ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸುವ ಯಾವುದೇ ಕೆಲಸಗಳಾಗಬಾರದು, ಈ ಸಂದರ್ಭದಲ್ಲಿ ಧರ್ಮದ ರಕ್ಷಣೆಗೆ, ಹಿಂದೂಗಳ ಸಂಘಟನೆಗೆ ಪರಿಶ್ರಮವಹಿಸುವ ಅಗತ್ಯತೆ ಹಾಗೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯತೆಯಿದ್ದು ಹಿಂದೂ ಬ್ರಿಗೇಡ್ ಸಂಘಟನೆ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಮುಖ ಸುಮಾರು 500 ಕ್ಕೂ ಹೆಚ್ಚು ಹಿಂದೂ ಬ್ರಿಗೇಡ್ ನ ಕಾರ್ಯಕರ್ತರು ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮದ ನಂತರ ಚಿಕ್ಕಮಗಳೂರಿನ ದತ್ತಾತ್ರೇಯ ಪೀಠಕ್ಕೆ ಹಿಂದೂ ಬ್ರಿಗೇಡ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭೇಟಿ ನೀಡಿ ದರ್ಶನ ಪಡೆದರು.
ಈ ಸಮಾರಂಭದಲ್ಲಿ ಬೆಂಗಳೂರಿನ ಉದ್ಯಮಿ ವಿ.ರವಿಕುಮಾರ್ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು, ಉಪಾಧ್ಯಕ್ಷರಾಗಿ ಸಂತೋಷ್ ಬೆನಕನಹಳ್ಳಿ ಕಲಬುರ್ಗಿ ಮತ್ತು ಮೋಹನ್ , ಕೊಡಗು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಬೆಂಗಳೂರಿನ ರಾಘವೇಂದ್ರರಾವ್, ಕಾರ್ಯದರ್ಶಿಗಳಾಗಿ ಶ್ರೀಮತಿ ಉಷಾ ರಾಜಮೂರ್ತಿ ಮತ್ತು ಚಿತ್ರದುರ್ಗದ ಜಿತೇಂದ್ರ, ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಚಿಕ್ಕಮಗಳೂರಿನ ಪ್ರವೀಣ್ ಖಾಂಡ್ಯ. ಸಂಚಾಲಕರಾಗಿ ಬೆಂಗಳೂರಿನ ಮುರಳಿಧರ್, ಸಮಿತಿಯ ಸದಸ್ಯರಾಗಿ ಶ್ರೀಮತಿ ಭಾರತಿ ಸುಂದರ್ ಅವರನ್ನು ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಹಿಂದೂ ಧರ್ಮದ ಬಲವರ್ಧನೆ ಹಾಗೂ ಧರ್ಮದ ಕುರಿತಾದ ಕಾರ್ಯಗಳನ್ನು ಸಂಘಟನೆ ರಾಜ್ಯದಾದ್ಯಂತ ನಡೆಸಲಿದೆ ಎಂದು ಪದಾಧಿಕಾರಿಗಳು ತಿಳಿಸಿದರು.







0 Comments