ಹಾಸನ: (ನ್ಯೂಸ್ ಮಲ್ನಾಡ್ ವರದಿ) ಆ್ಯಂಬುಲೆನ್ಸ್ ಚಾಲಕನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಸೂಕ್ತ ಪ್ರಕರಣ ದಾಖಲಿಸದೆ ಇರುವುದನ್ನು ಖಂಡಿಸಿ ಬೇಲೂರಿನ ಸರ್ಕಾರಿ ತಾಲೂಕು ಆಸ್ಪತ್ರೆಯ ವೈದ್ಯರೂ ಸೇರಿದಂತೆ ನೌಕರರು ಪ್ರತಿಭಟನೆ ನಡೆಸಿದರು.
ಗುರುವಾರ ಮಧ್ಯಾಹ್ನ ಮಗುವೊಂದಕ್ಕೆ ಅನಾರೋಗ್ಯ ಉಂಟಾಗಿತ್ತು, ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುವ ಮುನ್ನ ದರ್ಶನ್ ಎಂಬುವವರು ಆ್ಯಂಬುಲೆನ್ಸ್‌ನಲ್ಲಿ ಶುಶ್ರೂಷಕಿ ಇಲ್ಲದಿರುವುದಕ್ಕೆ, ಆಂಬುಲೆನ್ಸ್ ಗೆ ಪಡೆಯುವ ಶುಲ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಘಟನೆಗೆ ಸಂಬಂಧಪಟ್ಟಂತೆ ಹಲ್ಲೆಗೊಳಗಾದ ಆಂಬುಲೆನ್ಸ್ ಚಾಲಕ ಗೋಪಾಲಕೃಷ್ಣ ಮಾಹಿತಿ ನೀಡಿದರು.
ಅನಾರೋಗ್ಯಕ್ಕೆ ತುತ್ತಾಗಿದ್ದ ಮಗುವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು 108 ವಾಹನ ಇಲ್ಲದ ಕಾರಣ ಬೇರೆ ಆ್ಯಂಬುಲೆನ್ಸ್‌ಗೆ 325 ರೂ ಶುಲ್ಕಪಾವತಿ ಮಾಡುವಂತೆ ತಿಳಿಸಿದ್ದಕ್ಕೆ ಸಿಟ್ಟಾದ ದರ್ಶನ್ ಹಾಗೂ ಆತನ ಜೊತೆಗಾರರು ಹಲ್ಲೆ ನಡೆಸಿದ್ದರು, ಆಂಬುಲೆನ್ಸ್ ನಲ್ಲಿ ಶುಶ್ರೂಷಕಿಯನ್ನು ಕಳುಹಿಸಿಕೊಡುವಂತೆ ಅವರು ಕೇಳಿದ್ದು ಈ ಕುರಿತು ವೈದ್ಯರನ್ನು ಕೇಳುವಂತೆ ತಿಳಿಸಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಚಾಲಕ ಆರೋಪಿಸಿದರು.
ಪ್ರತಿದಿನವೂ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದ್ದು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಮಸ್ಯೆಗಳು ಎದುರಾಗುತ್ತಿವೆ, ಗುತ್ತಿಗೆದಾರ ನೌಕರರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ ಇತ್ತ ರಕ್ಷಣೆಯೂ ಇಲ್ಲ, ಈ ಕುರಿತಾಗಿ ಪೊಲೀಸರು ನಿಗಾವಹಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ನಂತರದಲ್ಲಿ ಸ್ಥಳಕ್ಕಾಗಮಿಸಿದ ಶಾಸಕ ಕೆ.ಎಸ್ ಲಿಂಗೇಶ್ ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮಾತನಾಡಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಮಾಡಲಾಗುವುದು ಅಂತೆಯೇ ಆಸ್ಪತ್ರೆ ಸಿಬ್ಬಂದಿಗಳ ಮೇಲೆ ನಡೆದಿರುವ ಇಂತಹ ಕೃತ್ಯಗಳು ಖಂಡನೀಯ ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದರು ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದರು.









0 Comments