ಹಾಸನ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಎಂಬುವವರಿಗೆ ಹಾಸನದ ಉವಿಭಾಗಾಧಿಕಾರಿ ಜಗದೀಶ್ ಹಾಸನಾಂಬೆ ದೇವಾಲಯದ ಬಳಿ ಕಪಾಳಮೋಕ್ಷ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಬಂದಿದ್ದರು. ದೇವಾಲಯದ ಆವರಣದಲ್ಲಿ ಕರ್ತವ್ಯದಲ್ಲಿದ್ದ ಇತರೆ ಅಧಿಕಾರಿಗಳ ಬಳಿ ಮನವಿ ಮಾಡಿ ಅವರು ವಿಐಪಿ ಗೇಟ್ ನ ಮೂಲಕ ಬರುವ ವೇಳೆ ಹಾಸನದ ಉಪ ವಿಭಾಗಾಧಿಕಾರಿ ಜಗದೀಶ್ ಶಿವೇಗೌಡ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಕುಟುಂಬಸ್ಥರು, ಭಕ್ತರು, ಅಧಿಕಾರಿಗಳೆಲ್ಲರ ಎದುರಿಗೆ ಎ.ಸಿ ಜಗದೀಶ್ ಕಪಾಳಮೋಕ್ಷ ಮಾಡಿದ್ದರು. ಈ ಹಿನ್ನೆಲೆ ಎಸಿ ಜಗದೀಶ್ ನಡೆ ವಿರುದ್ಧ ಭಕ್ತರಿಂದ ಆಕ್ರೋಶ ವ್ಯಕ್ತವಾಗಿದ್ದು, ದೇವಾಲಯದಲ್ಲಿ ಹೊಂದಿರಬೇಕಾದ ಸೌಜನ್ಯ ಹಾಗೂ ಶಾಂತಿಯನ್ನು ಕಾಪಾಡದೇ ಕೈ ಮಾಡಿರುವುದು ಸರಿಯಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿದೆ.
ವರ್ಷಕ್ಕೆ ಒಂದುಬಾರಿ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಿಯ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ಲಕ್ಷಾಂತರ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಅದರಂತೆಯೇ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ತಮ್ಮ ಪರಿವಾರ ಸಮೇತರಾಗಿ ದೇವಿ ದರ್ಶನಕ್ಕೆ ಬಂದಿದ್ದಾರೆ. ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮನವಿ ಮಾಡಿ ವಿಐಪಿ ಗೇಟ್‌ನಲ್ಲಿ ಆಗಮಿಸಿದ್ದಾರೆ.
ಇದನ್ನು ಕಂಡ ಎ.ಸಿ ಜಗದೀಶ್ ಶಿವೇಗೌಡರನ್ನು ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿಯೇ ನಿಲ್ಲಿಸಿ ಯಾಕೆ ಓಡಿ ಬರುತ್ತಿದ್ದೀರಾ? ನಿಮಗೆ ಈ ಗೇಟ್‌ನಲ್ಲಿ ಯಾರು ಒಳಗಡೆ ಬಿಟ್ಟಿದ್ದು? ಸರದಿಯಲ್ಲಿ ಹೋಗುವುದು ಬಿಟ್ಟು ಇಲ್ಲಿ ಯಾಕೆ ಬಂದಿದ್ದೀರಾ? ಎಂದು ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ತಾನೂ ಜಿಲ್ಲಾ ಪಂಚಾಯತ್ ನೌಕರ ಎಂದು ಶಿವೇಗೌಡ ಗುರುತಿನ ಚೀಟಿ ತೋರಿಸಿದ್ದಾರೆ. ಇದರಿಂದಾಗಿ ಮತ್ತಷ್ಟು ಸಿಟ್ಟಿಗೆದ್ದ ಎಸಿ ಜಗದೀಶ್, ಶಿವೇಗೌಡ ಕೊರಳಿನಲ್ಲಿ ಧರಿಸಿದ್ದ ಕಾರ್ಡ್ ಅನ್ನು ಕಿತ್ತು ಎಸೆದಿದ್ದಾರೆ. ಅಲ್ಲದೇ ಕುಟುಂಬದವರ ಮುಂದೆಯೇ ಶಿವೇಗೌಡಗೆ ಕಪಾಳಮೋಕ್ಷ ಮಾಡಿದ್ದಾರೆ.
ಒಟ್ಟಾರೆ ಸರ್ಕಾರಿ ಅಧಿಕಾರಿಯ ಈ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ದೇವಾಲಯದಲ್ಲಿ ಯಾರೂ ಸಂಯಮವನ್ನು ಕಳೆದುಕೊಳ್ಳಬಾರದು ದೇವಿಯ ದರ್ಶನವನ್ನು ಶಾಂತತೆಯಿಂದ ಎಲ್ಲರೂ ಪಡೆಯಬೇಕು ಎಂಬ ಮಾತನ್ನು ಹೇಳಿದ್ದಾರೆ.

0 Comments