ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ದೇವಸ್ಥಾನಗಳು, ಮಠ ಮಂದಿರಗಳು ಹಿಂದೂ ಧಾರ್ಮಿಕ ಭಾವನೆಗಳನ್ನು ಹೊಂದಿರುವ ಆಚರಣೆಗಳು ನಡೆಯುವ ವೇಳೆ ಹಾರಿಸಲ್ಪಡುವ ಕೇಸರಿ ಬಾವುಟ ಹಾಗೂ ಧರಿಸುವ ಕೇಸರಿ ಶಾಲನ್ನು ನಾವೆಂದೂ ವಿರೋಧ ಮಾಡಲಾರೆವು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಹೇಳಿಕೆ ನೀಡಿದರು.
ಈ ಕುರಿತು ಮಾತನಾಡಿದ ಅವರು ಕೇಸರಿ ಬಲಿದಾನದ ಸಂಕೇತ, ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಒಂದೊಂದು ಬಣ್ಣಗಳು ಬಲಿದಾನ, ಶಾಂತಿ ಹಾಗೂ ಸಮೃದ್ಧಿಯ ಸಂಕೇತವಾಗಿವೆ ಎಂದರು.
ಕೇಸರಿ ಎಂದರೆ ಬಿಜೆಪಿಯಲ್ಲ ಆ ಭಾವನೆಯನ್ನು ತೆಗೆಯಿರಿ, ಕಾರ್ಯಕರ್ತರಿಗೆ ಕರೆ:
ಈ ಕುರಿತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಜೆಡಿಎಸ್ ನ ಎಲ್ಲಾ ಕಾರ್ಯಕರ್ತರಲ್ಲೂ ನಾವು ಹೇಳುವುದೇನೆಂದರೆ, ಕೇಸರಿಯನ್ನು ಜೆಡಿಎಸ್ ಪಕ್ಷದವರು ವಿರೋಧಿಸುತ್ತಾರೆ ಎಂಬ ಭಾವನೆಯನ್ನು ತೆಗೆದುಹಾಕಿ, ಕೇಸರಿ ಎಂದಕೂಡಲೆ ಅದು ಬಿಜೆಪಿ ಅವರು ಎನ್ನುವ ಭಾವನೆಯನ್ನೂ ತೆಗೆದುಹಾಕಿ. ಕೇಸರಿ ಎನ್ನುವಂತದ್ದು ಹಿಂದೂ ಧರ್ಮದ ಪ್ರತೀಕವಾಗಿದೆ. ಅದ್ದರಿಂದ ಕೇಸರಿ ಕಂಡಲ್ಲಿ ಬಿಜೆಪಿ ಅವರಿದ್ದಾರೆ ಎಂದುಕೊಳ್ಳುವುದು ಬೇಡ ಎಂಬುದಾಗಿ ತಿಳಿಸಿದರು.
ಬಿಜೆಪಿ ಬೇರೆ ಕೇಸರಿ ಬೇರೆ ಎನ್ನುವಂತದ್ದನ್ನು ನಾವು ಮನಗಾಣಬೇಕು, ಕೇಸರಿ ಎಲ್ಲಾ ಪಕ್ಷದಲ್ಲಿರುವ ಹಿಂದೂಗಳ ಸಂಕೇತ ಎನ್ನುವುದನ್ನು ಸ್ಪಷ್ಟಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಸರಿ ಕಂಡರೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ, ಆದರೆ ಬಣ್ಣವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಆಯಾಯ ಬಣ್ಣದ ಮಹತ್ವ ಹಾಗೂ ಬಣ್ಣಕ್ಕೆ ಯಾರೂ ಸೀಮಿತ ಆಗುವುದು ಬೇಡ ಎಂಬ ಹೇಳಿಕೆಯು ವಿವಿಧ ಪಕ್ಷಗಳ ನಾಯಕರ ಚಿಂತನೆ ಹಾಗೂ ಮನಸ್ಥಿತಿಯನ್ನು ವ್ಯಕ್ತಪಡಿಸುತ್ತದೆ.
ಶಾರದಾ ಶರನ್ನವರಾತ್ರಿ ಮಹೋತ್ಸವ: ರಾಜರಾಜೇಶ್ವರಿ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸುತ್ತಿರುವ ದೇವಿ ಶಾರದೆ
ಶೃಂಗೇರಿ: ಶೃಂಗೇರಿಯಲ್ಲಿ ಅದ್ಧೂರಿಯಾಗಿ ಶಾರದಾ ಶರನ್ನವರಾತ್ರಿ ಉತ್ಸವ ಜರುಗುತ್ತಿದ್ದು, ಇಂದು ಜಗನ್ಮಾತೆ ಶಾರದಾದೇವಿಯು ರಾಜರಾಜೇಶ್ವರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ.
ನವರಾತ್ರಿಯ 9 ದಿನಗಳಲ್ಲಿ 9 ಅಲಂಕಾರಗಳಿಂದ ಕಂಗೊಳಿಸುವ ಮಾತೆಯು ಇಂದು ವಿಶೇಷವಾಗಿ ರಾಜರಾಜೇಶ್ವರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಪಾಷ, ಅಂಕುಶ, ಪುಷ್ಪ ಬಾಣಗಳನ್ನು ಧರಿಸಿರುವ ಮಾತೆಯು ಲಕ್ಷ್ಮೀ, ಸರಸ್ವತಿಯರಿಂದ ಚಾಮರ ಸೇವೆಯನ್ನು ಪಡೆಯುತ್ತಿದ್ದಾಳೆ.
ದೇವಿಯ ಪದತಲದಲ್ಲಿ ಕನ್ನಡಿ ಇರುವುದು ಸ್ವಚ್ಛಂದ ಮನಸ್ಸನ್ನು ಬಿಂಬಿಸುವಂಥದ್ದು ಹಾಗೂ ಈ ಅಲಂಕಾರದ ವೈಶಿಷ್ಟ್ಯವೇ ಆಗಿದೆ.
ಶೃಂಗೇರಿಗೆ ಸುತ್ತಮುತ್ತಲಿನ ಊರುಗಳಿಂದ ರಾಜ್ಯದ ಹಲವೆಡೆಗಳಿಂದ ಜನರು ಆಗಮಿಸುತ್ತಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಶೃಂಗೇರಿಯ ಗಾಂಧಿ ಮೈದಾನದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಅನೇಕ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುವ ಭಕ್ತರು ದೇವಿ ಹಾಗೂ ಜಗದ್ಗುರುಗಳ ದರ್ಶನ ಪಡೆದು ಶ್ರೀ ಮಠದ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಇಲ್ಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ಒಟ್ಟಾರೆ ಶೃಂಗೇರಿಯಲ್ಲಿ ಕೊರೋನಾ ನಂತರದ ಅವಧಿಯ ನವರಾತ್ರಿ ಉತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದು, ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ವಿದ್ಯುತ್ ದೀಪಾಲಂಕಾರಗಳಿಂದ ಇಡೀ ಪಟ್ಟಣವು ಶೃಂಗಾರಗೊಂಡಿದ್ದು, ರಾತ್ರಿಯ ವೇಳೆ ರಾಜಗೋಪುರದ ದೀಪಾಲಂಕಾರವು ಆಕರ್ಷಣೀಯವಾಗಿ ಕಾಣಿಸುತ್ತದೆ.









0 Comments