ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಅದ್ಧೂರಿಯಾಗಿ ಶಾರದಾ ಶರನ್ನವರಾತ್ರಿ ಉತ್ಸವ ಜರುಗುತ್ತಿದ್ದು, ಇಂದು ಜಗನ್ಮಾತೆ ಶಾರದಾದೇವಿಯು ರಾಜರಾಜೇಶ್ವರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ.

ನವರಾತ್ರಿಯ 9 ದಿನಗಳಲ್ಲಿ 9 ಅಲಂಕಾರಗಳಿಂದ ಕಂಗೊಳಿಸುವ ಮಾತೆಯು ಇಂದು ವಿಶೇಷವಾಗಿ ರಾಜರಾಜೇಶ್ವರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಪಾಷ, ಅಂಕುಶ, ಪುಷ್ಪ ಬಾಣಗಳನ್ನು ಧರಿಸಿರುವ ಮಾತೆಯು ಲಕ್ಷ್ಮೀ, ಸರಸ್ವತಿಯರಿಂದ ಚಾಮರ ಸೇವೆಯನ್ನು ಪಡೆಯುತ್ತಿದ್ದಾಳೆ.


ದೇವಿಯ ಪದತಲದಲ್ಲಿ ಕನ್ನಡಿ ಇರುವುದು ಸ್ವಚ್ಛಂದ ಮನಸ್ಸನ್ನು ಬಿಂಬಿಸುವಂಥದ್ದು ಹಾಗೂ ಈ ಅಲಂಕಾರದ ವೈಶಿಷ್ಟ್ಯವೇ ಆಗಿದೆ. 

ಶೃಂಗೇರಿಗೆ ಸುತ್ತಮುತ್ತಲಿನ ಊರುಗಳಿಂದ ರಾಜ್ಯದ ಹಲವೆಡೆಗಳಿಂದ ಜನರು ಆಗಮಿಸುತ್ತಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಶೃಂಗೇರಿಯ ಗಾಂಧಿ ಮೈದಾನದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಅನೇಕ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸುವ ಭಕ್ತರು ದೇವಿ ಹಾಗೂ ಜಗದ್ಗುರುಗಳ ದರ್ಶನ ಪಡೆದು ಶ್ರೀ ಮಠದ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸಿ ಇಲ್ಲಿನ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. 


ಒಟ್ಟಾರೆ ಶೃಂಗೇರಿಯಲ್ಲಿ ಕೊರೋನಾ ನಂತರದ ಅವಧಿಯ ನವರಾತ್ರಿ ಉತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದ್ದು, ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ವಿದ್ಯುತ್ ದೀಪಾಲಂಕಾರಗಳಿಂದ ಇಡೀ ಪಟ್ಟಣವು ಶೃಂಗಾರಗೊಂಡಿದ್ದು, ರಾತ್ರಿಯ ವೇಳೆ ರಾಜಗೋಪುರದ ದೀಪಾಲಂಕಾರವು ಆಕರ್ಷಣೀಯವಾಗಿ ಕಾಣಿಸುತ್ತದೆ.