ಹಾಸನ: (ನ್ಯೂಸ್ ಮಲ್ನಾಡ್ ವರದಿ) ಹಾಸನ ಜಿಲ್ಲೆಯ ಅಧಿದೇವತೆ ವರ್ಷದಲ್ಲಿ ಕೆಲವು ದಿನಗಳಷ್ಟೇ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸುವ ಹಾಸನಾಂಬೆ ದೇಗುಲವನ್ನು ಇಂದು ತೆರೆಯಲಾಗಿದ್ದು ಪೂಜಾ ಕೈಂಕರ್ಯಗಳು ಆರಂಭವಾಗಿದೆ.
ಈ ಸುಸಂದರ್ಭದಲ್ಲಿ ಜಿಲ್ಲಾಡಳಿತವು ದಸರಾವನ್ನು ಮಾದರಿಯಾಗಿಟ್ಟುಕೊಂಡು ನಗರವನ್ನು ಅಲಂಕರಿಸಿದೆ, ದೇಶದಾದ್ಯಂತ ಕಳೆದ ಎರಡು ವರ್ಷ ಕೊರೋನಾ ಹೆಮ್ಮಾರಿ ಆವರಿಸಿದ್ದರಿಂದ ಹಾಸನದ ಶಕ್ತಿ ದೇವತೆ ದರ್ಶನ ಮಾಡಲು ಅಡಚಣೆ ಕಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿದ್ದವು.
ಇದನ್ನೂ ಓದಿ: ಚಿಕ್ಕಮಗಳೂರು: ವಿದ್ಯುತ್ ತಗುಲಿ ಗರ್ಭಿಣಿ ಮಹಿಳೆ ಸಾವು, ನಾಲ್ವರು ಆಸ್ಪತ್ರೆಗೆ
ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಸಂಕಷ್ಟಗಳು ಮಾಯವಾಗಿರುವುದರಿಂದ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಮಾಡಲು ಜಿಲ್ಲಾಡಳಿತವು ಸಕಲ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಹಾಸನಾಂಬೆ ದೇವಾಲಯಕ್ಕೆ ಬರುವ ಲಕ್ಷಾಂತರ ಮಂದಿ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ನೇತೃತ್ವದಲ್ಲಿ ಅನೇಕ ಸಭೆಗಳು ನಡೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಸಹ ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ.
ಈಗಾಗಲೇ ದಸರಾ ಮಹೋತ್ಸವ ಮುಗಿದಿದ್ದು, ಅಲ್ಲಿದ್ದ ಸುಂದರ ಆನೆಗಳ ಕಲಾಕೃತಿಗಳನ್ನು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ತರಲಾಗಿದೆ. ನಗರದ ಮುಖ್ಯ ವೃತ್ತಗಳ ಮಧ್ಯೆ ಮಂಟಪ, ಸ್ವಾಗತದ್ವಾರ ಹಾಗೂ ದಸರಾ ಮಾದರಿಯಲ್ಲಿಯೇ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಭಕ್ತರಮನ ಸೆಳೆಯುತ್ತಿವೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ವರ್ಷಕ್ಕೊಮ್ಮೆ ಹಾಸನಾಂಬೆ ತಾಯಿ ತನ್ನ ದರ್ಶನ ಭಾಗ್ಯ ಕರುಣಿಸಲಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗದ ಲಕ್ಷಾಂತರ ಭಕ್ತರ ದಂಡೆ ಬರುತ್ತದೆ.
ಇಂದಿನಿಂದ 15 ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದ್ದು ಮೊದಲ ದಿನ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಉಳಿದ 13 ದಿನ ಮಾತ್ರ ಸಾರ್ವಜನಿಕ ದರ್ಶನಕ್ಕೆ ಲಭ್ಯವಿರುತ್ತದೆ.
ಇಂದು ಮಧ್ಯಾಹ್ನ 12.30ಕ್ಕೆ ಸಾಂಪ್ರದಾಯಿಕ ವಿಧ ವಿಧಾನಗಳ ಮೂಲಕ ದೇವಾಲಯದ ಗರ್ಭಗುಡಿ ಬಾಗಿಲು ತೆರೆದಿದ್ದು, ಇಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲ. ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅಕ್ಟೋಬರ್ 25ರ ಮಂಗಳವಾರದಂದು ಅಮವಾಸ್ಯೆ ಇರುವುದರಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ.
27 ರಂದು ದೇವಿಯ ದರ್ಶನಕ್ಕೆ ತೆರೆ:
ಪೂಜೆಗಳು ಎಂದಿನಂತೆ ನಡೆಯುತ್ತದೆ. ಅ.27 ರಂದು ಮಧ್ಯಾಹ್ನ ಸುಮಾರು 1.30 ರಿಂದ 2 ಗಂಟೆ ಒಳಗೆ ಶಾಸ್ತ್ರೋಕ್ತವಾಗಿ ಧಾರ್ಮಿಕ ಪೂಜಾ ಕೈಂಕರ್ಯ ಮುಗಿಸಿ ಎಂದಿನಂತೆ ಬಾಗಿಲನ್ನು ಮುಚ್ಚಲಾಗುವುದು.
ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಲಭ್ಯ ಮತ್ತು ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಸರತಿ ಸಾಲುಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಲಾಗಿದೆ. ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಲಭಿಸುವ ಹಾಸನಾಂಬೆ ತಾಯಿಯ ದರ್ಶನಕ್ಕಾಗಿ ರಾಜ್ಯ ಮತ್ತು ದೇಶದ ಹಲವೆಡೆಯಿಂದಲೂ ಕೂಡ ಭಕ್ತರ ದಂಡೆ ಹರಿದುಬರಲಿದೆ.








0 Comments