ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಕೃಷಿಕರು ಅವಲಂಬಿತರಾಗಿರುವ ಅಡಿಕೆ ಬೆಳೆ ಆಮದು ಹಾಗೂ ಈ ಕುರಿತಾದ ಆರೋಪದ ಕುರಿತು ಗೃಹ ಸಚಿವ ಆರಗಜ್ಞಾನೇಂದ್ರ ಇಂದು ಪ್ರತಿಕ್ರಿಯೆ ನೀಡಿದರು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅಧಿಕಾರದ ಅವಧಿಯಲ್ಲಿ ಆಗಿರುವ ಒಪ್ಪಂದದಂತೆ ಭೂತಾನ್‌ ನಿಂದ ಭಾರತಕ್ಕೆ ಹಸಿ ಅಡಕೆ ಮಾತ್ರ ಆಮದಾಗುತ್ತಿದೆ. ಇದರಿಂದ ದೇಶದ ಅಡಕೆ ಬೆಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. 

ಈ ಕುರಿತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಪಂ ವ್ಯಾಪ್ತಿಯ ಬೇಗುವಳ್ಳಿ ಜಂಬುವಳ್ಳಿ ಗ್ರಾಮದ 2.75 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವರು ಭೂತಾನ್‌ನಿಂದ ಕೇವಲ 17 ಸಾವಿರ ಟನ್‌ ಹಸಿ ಅಡಕೆ ಬರುತ್ತಿದೆ. ಇದರಿಂದ ಶೇ.12 ಒಣ ಅಡಕೆ ಮಾತ್ರ ಸಿದ್ಧವಾಗುತ್ತದೆ. ಭಾರತದಿಂದ ಇದರ ದುಪ್ಪಟ್ಟು ಅಡಕೆ ಉತ್ಪನ್ನಗಳು ಆ ದೇಶಕ್ಕೆ ನಿರ್ಯಾತವಾಗುತ್ತದೆ ಎಂಬುದನ್ನು ಮನಗಾಣಬೇಕಿದೆ. ಈ ಒಪ್ಪಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಒಪ್ಪಂದವೂ ಅಲ್ಲ. ಬಹಳ ಮುಖ್ಯವಾಗಿ ಆ ದೇಶ ಆಯಕಟ್ಟಿನ ಪ್ರದೇಶವಾದ ಕಾರಣ ಭೂತಾನಿನೊಂದಿಗೆ ಭಾರತಕ್ಕೆ ಸ್ನೇಹವೂ ಅನಿವಾರ್ಯವಾಗಿದೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷದವರು ಮಾಡುತ್ತಿರುವ ಟೀಕೆಗೆ ಕೃಷಿಕರು ಕಿವಿಗೊಡಬಾರದು ಎಂದರು.




ಅಡಿಕೆಗೆ ತಗುಲಿರುವ ಎಲೆ ಚುಕ್ಕಿರೋಗದಿಂದಾಗಿ ಕೆಲವೆಡೆ ಅಡಕೆ ತೋಟವೇ ನಾಶವಾಗುವ ಹಂತ ತಲುಪಿರುವುದು ಆತಂಕದ ಸಂಗತಿಯಾಗಿದೆ. ಈ ಭೀಕರ ರೋಗದ ನಿಯಂತ್ರಣದ ಸಲುವಾಗಿ ಸರ್ಕಾರದಿಂದ 8 ಕೋಟಿ ರು. ಹಣವನ್ನು ಮಂಜೂರು ಮಾಡಿಸಲಾಗಿದ್ದು ಈಗಾಗಲೇ 4 ಕೋಟಿ ಹಣ ಬಿಡುಗಡೆಯಾಗಿದೆ. ಈ ರೋಗಕ್ಕೆ ಮೊದಲ ಸ್ಪ್ರೇಗೆ ಅಗತ್ಯವಿರುವ ಔಷಧವನ್ನು ಕೂಡಾ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸ್ಥಳೀಯರು ಹಾಗೂ ತೀರ್ಥಹಳ್ಳಿ ಭಾಗದ ಅನೇಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಪರಿಹಾರಕ್ಕಾಗಿ ಈ ವೇಳೆ ಗೃಹಸಚಿವರಲ್ಲಿ ಮನವಿ ಮಾಡಿದರು.