ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಪಿತ್ತಕೋಶದ ಶಸ್ತ್ರಚಿಕಿತ್ಸೆ ಭಯದಿಂದಾಗಿ ರೋಗಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಬನ್ನೂರು ಗ್ರಾಮದ ನಿವಾಸಿ ಬಿ.ಎಲ್.ಸುರೇಶ್ (57) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಕ್ಕೆ ಭಯಗೊಂಡ ರೋಗಿಯು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂದಿದ್ದಾರೆ ಎನ್ನಲಾಗಿದೆ. ಮಂಗಳವಾರ ಅವರು ಆತ್ಮಹತ್ಯೆಗೆ ಶರಣಾಗಿದ್ದು ಕುಟುಂಬಸ್ಥರು ಅತೀವ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೈಕ್ ನಿಂದ ಬಿದ್ದು ಸಾವನ್ನಪ್ಪಿದ ಗ್ರಾಮ ಪಂಚಾಯತ್ ಸದಸ್ಯ
ಬಾಳೆಹೊನ್ನೂರು ಸಮೀಪದ ಬನ್ನೂರಿನ ಸುರೇಶ್ ಮತ್ತು ಅವರ ಪತ್ನಿ ಭಾಗ್ಯ ಕೆಲವು ಸಮಯದಿ೦ದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದೆರಡು ದಿನಗಳ ಹಿಂದೆ ಸುರೇಶ್‌ಗೆ ಜ್ವರ ಹೆಚ್ಚಾಗಿತ್ತು. ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚುವರಿ ಚಿಕಿತ್ಸೆಗಾಗಿ ಕೊಪ್ಪದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೈದ್ಯರು ತಪಾಸಣೆ ಮಾಡಿಸಿದಾಗ ಪಿತ್ತಕೋಶದಲ್ಲಿ ಕಲ್ಲು ಇದೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದರು.
ವೈದ್ಯರ ಮಾತಿನಿಂದ ಆತಂಕಗೊಂಡ ಸುರೇಶ್, ತನ್ನ ಪತ್ನಿಯೂ ಅನಾರೋಗ್ಯ ಪೀಡಿತಳಾಗಿದ್ದಾರೆ. ನಾನು ಸಹ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಮುಂದಿನ ಭವಿಷ್ಯದ ಗತಿ ಏನೆಂದು ಭೀತಿಗೊಳಗಾಗಿ, ಮನೆಗೆ ಬಂದ ಬಳಿಕ ಮಧ್ಯರಾತ್ರಿ ಮನೆ ಮುಂಭಾಗದಲ್ಲಿ ಇರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಮೃತನ ಸಹೋದರ ಬಿ.ಎಲ್.ಯೋಗೇಶ್ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ರೋಗಗಳು ಎಂತಹುದೇ ಇರಲಿ ಅದಕ್ಕೆ ಸೂಕ್ತವಾದ ಔಷಧೋಪಚಾರ ಇರುವ ಈ ಯುಗದಲ್ಲಿ ಇಂತಹ ನಿರ್ಧಾರ ಕೈಗೊಂಡು ಸಾವಿಗೆ ಶರಣಾಗಿರುವುದು ಸಂಬಂಧಿಕರಲ್ಲಿ ಕುಟುಂಬಸ್ಥರಲ್ಲಿ ಹೆಚ್ಚಿನ ಬೇಸರವನ್ನು ತರಿಸಿದೆ.








0 Comments