ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಹೆಮ್ಮಾರಿ ಎಲೆಚುಕ್ಕಿ ರೋಗ ಬಿಟ್ಟೂಬಿಡದೆ ಮಲೆನಾಡಿನ ರೈತರ ತೋಟಗಳನ್ನು ಬಾಧಿಸುತ್ತಿದ್ದು, ಅಡಿಕೆಗೆ ರೋಗ ಬಾಧಿಸಿದ ಹಿನ್ನೆಲೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಳಮದೂರು ಗ್ರಾಮದ ಕೃಷ್ಣಪ್ಪಗೌಡ (60) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮೃತ ರೈತ. ತೋಟಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನು ಸಾಲ ಮಾಡಿದ್ದ ಕೃಷಿಕ ತೋಟಕ್ಕೆ ರೋಗ ಆವರಿಸಿ ಬೆಳೆನಾಶ ಹೊಂದುತ್ತಿರುವುದನ್ನು ಕಂಡು ತಾಳಲಾರದೇ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.


ಕೃಷಿ ಭೂಮಿಯ ಅಭಿವೃದ್ದಿಗಾಗಿ ಕೆನರಾ ಬ್ಯಾಂಕ್ ನಲ್ಲಿ ಮೂರು ಲಕ್ಷ ಹಣವನ್ನು ಸಾಲ ಮಾಡಿದ್ದು, 1.5 ಲಕ್ಷ ಹಣವನ್ನು ಸಹಕಾರ ಸಂಘದಲ್ಲಿ ಸಾಲ ಮಾಡಿದ್ದರು. ಅಡಿಕೆ ಬೆಳೆಗೆ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಎಲೆಚುಕ್ಕಿ ರೋಗ ಹರಡುತ್ತಿದ್ದು ಈ ಕುರಿತು ಸರ್ಕಾರ ಅತಿ ಶೀಘ್ರವಾಗಿ ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಂಡು ರೈತರಿಗೆ ಸಹಕಾರಿಯಾಗುವ ರೀತಿಯಲ್ಲಿ ವರ್ತಿಸಬೇಕಿದೆ.

ಈ ಕುರಿತು ಕಾರಣ ತಿಳಿಸಿರುವ ಮೃತ ಕೃಷಿಕನ ಪುತ್ರ, ಸಾಲ ತೀರಿಸುವ ಕುರಿತಾಗಿಯೆ ತಂದೆಯವರು ಯೋಚಿಸಿದ್ದು, ಯಾವುದೇ ಪರ್ಯಾಯ ಮಾರ್ಗಗಳು ದೊರೆಯದ ಕಾರಣ ಈ ನಿರ್ಧಾರಕ್ಕೆ ಬಂದಿದ್ದು, ಸಾವಿಗೆ ಇದಲ್ಲದೇ ಬೇರಾವುದೆ ಕಾರಣಗಳಿಲ್ಲ ಬೇರೇನೂ ಘಟನೆಗಳು ನಡೆದಿರಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.