ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಜೆಎಂಜೆ ಚಿತ್ರಮಂದಿರದಲ್ಲಿ ಕಾಂತಾರ ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಹೊರ ಜಿಲ್ಲೆಯ ಕುಟುಂಬವೊಂದರ ಮೇಲೆ ಕಿಡಿಗೇಡಿಗಳು ಕಿರುಕುಳ ನೀಡಿ, ಆ ಬಳಿಕ ನಡೆದ ಗಲಾಟೆಯಲ್ಲಿ ಕುಟುಂಬದ ಮುಖ್ಯಸ್ಥನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಜೆಎಂಜೆ ಚಿತ್ರಮಂದಿರದಲ್ಲಿ ಕನ್ನಡದ ಕಾಂತಾರ ಸಿನೆಮಾ ವೀಕ್ಷಣೆ ವೇಳೆ ಸಣ್ಣ ಕಾರಣಕ್ಕೆ ಗಲಾಟೆ ನಡೆದಿದ್ದು, ನಂತರದಲ್ಲಿ ಇದು ಹೊಡೆದಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

ಇದನ್ನೂ ಓದಿ: ಚಿಕ್ಕಮಗಳೂರು: ಆನ್ಲೈನ್ ಮೂಲಕ ಇಂಜಿನಿಯರ್ ಮಹಿಳೆಗೆ 73.68 ಲಕ್ಷ ವಂಚನೆ


ಉಡುಪಿ ಜಿಲ್ಲೆಯ ವಿರ್ವಾಲ್ ನಿವಾಸಿಯಾದ ಅಶೋಕ್ ಭಂಡಾರಿ (47) ಎಂಬುವವರು ಕಳೆದ ಮೂರು ದಿನಗಳ ಹಿಂದೆ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೊಪ್ಪ ಸಮೀಪವಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸೋಮವಾರ ಸಂಜೆ 06-45 ಕ್ಕೆ ಕೊಪ್ಪದ ಜೆಎಂಜೆ ಥಿಯೇಟರ್‌ ನಲ್ಲಿ ಪ್ರದರ್ಶನವಾಗುತ್ತಿದ್ದ ಕಾಂತಾರ ಚಿತ್ರ ವೀಕ್ಷಿಸಲು ಅಶೋಕ್ ಭಂಡಾರಿ ಕುಟುಂಬದವರೊಂದಿಗೆ ತೆರಳಿ ಚಲನಚಿತ್ರ ವೀಕ್ಷಿಸುತ್ತಿರುವ ವೇಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ನಾಲ್ವರು ಯುವಕರು ಜೋರಾಗಿ ಕಿರುಚಾಡಿ, ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದನ್ನು ಅಶೋಕ್ ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ಕಿರುಚದಂತೆ, ಅಡ್ಡಿಪಡಿಸದಂತೆ ಕುಟುಂಬ ಸಮೇತ ಚಿತ್ರವೀಕ್ಷಣೆಗೆ ಆಗಮಿಸಿದ್ದ ಅವರು ಕೋರಿದ್ದಾರೆ.  

ಈ ಮಾತಿಗೆ ಕೋಪಗೊಂಡ ಯುವಕರ ಗುಂಪು ಪ್ರತ್ಯುತ್ತರ ನೀಡಿ ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದು ಗುಂಪುಗಳ ನಡುವೆ ಗಲಾಟೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದು, ಈ ವೇಳೆ ಚಿತ್ರಮಂದಿರದಲ್ಲಿದ್ದ ಇತರ ಪ್ರೇಕ್ಷಕರು ಎರಡೂ ಗುಂಪುಗಳಿಗೆ ಗದರಿಸಿ ಸುಮ್ಮನಾಗಿಸಿದ್ದಾರೆ ಎನ್ನಲಾಗಿದೆ.


ಆ ಬಳಿಕ ಎಲ್ಲರೂ ಸುಮ್ಮನೆ ಚಿತ್ರ ವೀಕ್ಷಿಸಿದ್ದಾರೆ. ಚಿತ್ರದ ವೀಕ್ಷಣೆ ಮಾಡಿ ಹೊರ ಬಂದ ಅಶೋಕ ಭಂಡಾರಿ ರಾತ್ರಿ 10.30 ರ ಸುಮಾರಿಗೆ JMJ ಟಾಕಿಸ್‌ ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ಮಾಡಿದ್ದ‌ ತಮ್ಮ ಕಾರ್‌ ತರಲು ಪತ್ನಿಯೊಂದಿಗೆ ತೆರಳಿದ್ದಾರೆ. ಈ ವೇಳೆ ಅವರನ್ನು ಹಿಂಬಾಲಿಸಿ ಅಲ್ಲಿಗೆ ಬಂದ ನಾಲ್ವರು ಯುವಕರು ಈಗ ಮಾತನಾಡು ಮಗನೇ ಎಂದು ಗೋಪಾಲ ಭಂಡಾರಿಯವರನ್ನು ಕಾರಿನಿಂದ ಎಳೆದು ಹೊರಹಾಕಿ, ನೆಲಕ್ಕೆ ಕೆಡವಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಜೊತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಕಾಲಿನಿಂದ ಒದ್ದು, ಅಲ್ಲೇ ಇದ್ದ ಕಲ್ಲಿನಿಂದ ಮುಖ ಮೂತಿ ನೋಡದೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ನಾವು ನಾಲ್ವರು ಸೇರಿ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂಬುದಾಗಿಯೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಶೋಕ್ ಭಂಡಾರಿ ಕೊಪ್ಪ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಆ ವೇಳೆ ಗಲಾಟೆ ಕೇಳಿ ಅಲ್ಲಿಗೆ ಆಗಮಿಸಿದ ಕುಟುಂಬಸ್ಥರು ಹಾಗೂ ಮೈದಾನದಲ್ಲಿ ನಿಲುಗಡೆ ಮಾಡಿದ ಬೇರೆ ವಾಹನಗಳ ಚಾಲಕರು ಗಲಾಟೆ ಬಿಡಿಸಿ, ಉಪಚರಿಸಿ ಚಿಕಿತ್ಸೆಗೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. 


ತನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ ನಾಲ್ವರು ಯುವಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಲ್ಲೆಗೀಡಾದ ಅಶೋಕ್‌ ದೂರು ದಾಖಲಿಸಿದ್ದಾರೆ.