ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಅವರ ಕುರಿತಾಗಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ, ಇಂತಹ ಪೋಸ್ಟ್ ಹಾಕುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ದೂರು ನೀಡಿದರು.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಕ್ಷೇತ್ರದಲ್ಲಿ ಜೀವರಾಜ್ ಅವರನ್ನು ಸಾಮಾಜಿಕವಾಗಿ ಎದುರಿಸಲಾಗದೇ ಕಾಂಗ್ರೆಸ್ ನ ಕೆಲವರು ವೈಯುಕ್ತಿಕವಾಗಿ ಜೀವರಾಜ್ ವಿರುದ್ಧ ಅವಹೇಳನಕಾರಿ ಪೋಸ್ಟ್, ವೈಯಕ್ತಿಕ ನಿಂದನೆ,ತೇಜೋವಧೆ ಮಾನಹರಣ, ಮಾನಸಿಕ ಸ್ಥೆರ್ಯವನ್ನು ಕುಗ್ಗಿಸುವ ಮತ್ತು ಬಿಜೆಪಿ ಕಾರ್ಯಕರ್ತರ ಪ್ರಚೋದನೆಯಲ್ಲಿ ತೊಡಗಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯವಾಗಿ ಎದುರಿಸಲಾರದೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ನರಸಿಂಹರಾಜಪುರ ಠಾಣೆಯ ಪಿಎಸ್ಸೈ ವಿ.ಟಿ ದಿಲೀಪ್ ಕುಮಾರ್ ಅವರನ್ನು ಮನವಿ ಮಾಡಿದರು.
ಇದನ್ನೂ ಓದಿ: ಕಾಫಿನಾಡಿನಲ್ಲೂ ಪಶುಗಳಿಗೆ ಆರಂಭವಾದ ಚರ್ಮಗಂಟು ರೋಗ | ರೋಗದ ಲಕ್ಷಣಗಳೇನು ? ನಿಯಂತ್ರಣಾ ಕ್ರಮಗಳೇನು ? ಇಲ್ಲಿದೆ ಡೀಟೇಲ್ಸ್
ರಾಜಕೀಯ ವೇದಿಕೆ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಡಿ.ಎನ್ ಜೀವರಾಜ್ ಅವರ ವಿರುದ್ಧವಾಗಿ ಪೋಸ್ಟ್ಗಳು, ಬರಹಗಳು ಶೇರ್ ಆಗುತ್ತಿದೆ ಎಂದು ಕೆಲ ಆಧಾರಗಳನ್ನು ಪೊಲೀಸರಿಗೆ ನೀಡಿರುವ ಪದಾಧಿಕಾರಿಗಳು ಯುವಕಾಂಗ್ರೆಸ್ ನರಸಿಂಹರಾಜಪುರ, ಅನಿಲ್ ಮಲ್ನಾಡ್, ಸಾಧನ್ ಗೌಡ, ರತನ್ ಗೌಡ, ರಜತ್ ಹ್ಯಾರಂಬಿ, ರಜಿತ್ ಹ್ಯಾರಂಬಿ ಎಂಬ ಖಾತೆಗಳ ಮೇಲೆ ಕ್ರಮವಹಿಸಬೇಕು ಎಂದು ಕೋರಿದ್ದಾರೆ.
ಈ ಕುರಿತು ವಾಟ್ಸಾಪ್ ಗ್ರೂಪ್ ನಲ್ಲಿ ಬಂದಿರುವ ಸಂದೇಶ ಹಾಗೂ ಫೇಸ್ಬುಕ್ ಪೋಸ್ಟ್ ಗಳ ದಾಖಲೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿದ ಪದಾಧಿಕಾರಿಗಳು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಘಟನೆಗಳು ಮತ್ತೊಮ್ಮೆ ನಡೆಯದಂತೆ ಎಚ್ಚರಿಕೆ ನೀಡಬೇಕಾಗಿ ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
ಈ ಕುರಿತಾಗಿ ಮಾತನಾಡಿದ ಠಾಣೆಯ ಪಿಎಸ್ಸೈ ವಿ.ಟಿ ದಿಲೀಪ್ ಕುಮಾರ್ ಗ್ರೂಪ್ ಗಳಿಂದ ಸಾಮಾಜಿಕ ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಗ್ರೂಪ್ ಅಡ್ಮಿನ್ ಗಳಿಗೆ ನೊಟೀಸ್ ಜಾರಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನರಸಿಂಹರಾಜಪುರದ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.









0 Comments