ಶಿವಮೊಗ್ಗ: (ನ್ಯೂಸ್ ಮಲ್ನಾಡ್) ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ತಾಲೂಕಿನ ಅಗಸವಳ್ಳಿಯ ಗೌಳಿ ಕ್ಯಾಂಪ್‌ನ ಇಸ್ಮಾಯಿಲ್ (20) ಬಂಧಿತ ಆರೋಪಿ. ಈತ ಸಾಮಾಜಿಕ ಜಾಲತಾಣದಲ್ಲಿ ಲಾಂಗು-ಮಚ್ಚುಗಳೊಂದಿಗೆ ಇರುವ ವಿಡಿಯೋ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದ್ದ ಎನ್ನಲಾಗಿದ್ದು ಈ ಹಿನ್ನೆಲೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಇಂದಿರಾ ಗಾಂಧಿ ಮತ್ತು ಕಾಫಿನಾಡಿನ ನಂಟನ್ನು ಭಾರತ್ ಜೋಡೋ ಯಾತ್ರೆಯಲ್ಲಿ ನೆನಪಿಸಿಕೊಂಡ ಕಾಂಗ್ರೆಸ್
ಈತ ಫೇಸ್‌ಬುಕ್‌ನಲ್ಲಿ ಇಸ್ಮಾಯಿಲ್ ಇಸ್ಮಾಯಿಲ್ ಎಂಬ ಖಾತೆ ಹೊಂದಿದ್ದ. ಜೊತೆಗೆ ಐದಾರು ಮಚ್ಚು ಮತ್ತು ತಲ್ವಾರ್‌ಗಳ ನಡುವೆ ಕಾಣಿಸಿಕೊಳ್ಳುವ ತನ್ನದೇ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಈ ಬಗ್ಗೆ ಸುಮೋಟೋ ಪ್ರಕರಣವನ್ನು ತುಂಗಾನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದರು. ಇನ್ನು ಇಸ್ಮಾಯಿಲ್ ತಮಿಳುನಾಡಿಗೆ ಹೋದಾಗ ಈ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಮಾಜಿಕ ಜಾಲತಾಣಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅನೇಕರು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಬರಹಗಳನ್ನು, ವೀಡಿಯೋಗಳನ್ನು ಹಂಚಿಕೊಂಡು ವಿಕೃತಿ ಮೆರೆಯುತ್ತಿದ್ದಾರೆ. ಇಂತಹುದರ ಮೇಲೆ ಪೊಲೀಸರೇ ಸ್ವಯಂಪ್ರೇರಿತವಾಗಿ ಗಮನವಹಿಸಿ ದೂರು ದಾಖಲು ಮಾಡಿಕೊಂಡು ಕ್ರಮವಹಿಸುತ್ತಿರುವುದು ಅಭಿನಂದನಾರ್ಹ.






0 Comments