ಹಾಸನ: (ನ್ಯೂಸ್ ಮಲ್ನಾಡ್ ವರದಿ) ಮೂರು ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ಮಂದಿ ಕೊನೆಯುಸಿರೆಳೆದಿರುವ ದುರ್ಘಟನೆ ತಡರಾತ್ರಿ ಸಂಭವಿಸಿದೆ. ದೇವಾಲಯಗಳ ದರ್ಶನವನ್ನು ಪಡೆಯಲು ತೆರಳಿದ್ದ ಕುಟುಂಬದ ಸದಸ್ಯರು ಸಾವಿಗೀಡಾಗಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣವಾರ ಹೋಬಳಿಯಲ್ಲಿರುವ ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60) ಹಾಗೂ ಭಾರತಿ (50) ಎಂದು ಗುರುತಿಸಲಾಗಿದೆ.
ಹಾಲಿನ ಟ್ಯಾಂಕರ್, KSRTC ಬಸ್ ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತ ಸಂಭವಿಸಿದೆ. ಎಡ ಬದಿಯಿಂದ ಬರಬೇಕಿದ್ದ ಹಾಲಿನ ಟ್ಯಾಂಕರ್ ಬಲ ಬದಿಯಿಂದ ಬಂದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಕಾರಣ ಡಿವಿಯೇಷನ್ ಪಡೆಯದೆ ಹಾಲಿನ ಟ್ಯಾಂಕರ್ ಆಗಮಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಟಿ.ಟಿ ವಾಹನದಲ್ಲಿದ್ದವರು ಅರಸೀಕೆರೆ ತಾಲೂಕಿನ, ಬಾಣವಾರ ಹೋಬಳಿಯ ಹಳ್ಳಿಕೆರೆ ಗ್ರಾಮದವರು. ಧರ್ಮಸ್ಥಳದಿಂದ ಹಾಸನಕ್ಕೆ ತೆರಳಿ, ಅಲ್ಲಿ ಹಾಸನಾಂಬೆಯ ದರ್ಶನ ಪಡೆದು ತಮ್ಮ ಊರಾದ ಹಳ್ಳಿಕೆರೆಗೆ ತೆರಳುತ್ತಿದ್ದರು. ಇನ್ನೇನು ಹಳ್ಳಿಕೆರೆಗೆ ಹೋಗಿ ಮನೆ ಸೇರುವ ತವಕದಲ್ಲಿದ್ದವರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬಾಣಾವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಸಿಕೆರೆ ಶಾಸಕ ಶಿವಲಿಂಗೇಗೌಡa ನು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಆರೋಗ್ಯ ವಿಚಾರಿಸಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು; ಭಾರತ್ ಜೋಡೋ ಯಾತ್ರೆಯಲ್ಲಿ ಪುನರುಚ್ಚರಿಸಿದ ರಾಹುಲ್ ಗಾಂಧಿ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕರು ಇಂದು ಮತ್ತೆ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ ಜನ್ಮನೀಡಿದ ಕಾಫಿನಾಡು ಚಿಕ್ಕಮಗಳೂರಿನ ಕುರಿತು ಮಾತನಾಡಿದ್ದಾರೆ ಹಾಗೂ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು 1000 ಕಿಮೀ ಪೂರೈಸಿದ್ದು ಈ ವೇಳೆ ಅನೇಕ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರುಗಳು ಬಳ್ಳಾರಿಯಲ್ಲಿ ಉಪಸ್ಥಿತರಿದ್ದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ರಾಜಸ್ಥಾನದ ಸಿ.ಎಂ ಅಶೋಕ್ ಗೆಹ್ಲೋಟ್ ಮಾತನಾಡಿ ಇಂದಿರಾ ಗಾಂಧಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಇಂದು ಯಾತ್ರೆ 1,000 ಕಿಲೋ ಮೀಟರ್ ಪೂರ್ಣಗೊಂಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣೆಗೆ ಸ್ಪರ್ಧಿಸಿದ್ರು. ಆಗ ನಾವೆಲ್ಲಾ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದೆವು. ಅಭೂತಪೂರ್ವ ಮತಗಳಿಂದ ಅವರನ್ನು ಗೆಲ್ಲಿಸಿ ಕಳಿಸಿದ್ದೀರಿ ಎಂದು ಇಂದಿರಾ ಗಾಂಧಿ ಅವರ ಚುನಾವಣೆ ಸಂದರ್ಭವನ್ನು ನೆನಪಿಸಿಕೊಂಡರು. ದೇಶದಲ್ಲಿ ಇಂದು ಸಂವಿಧಾನವನ್ನು ಲೇವಡಿ ಮಾಡಲಾಗುತ್ತಿದೆ. ಸಮಾಜದಲ್ಲಿ ಜಾತಿಯ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಇದನ್ನೆಲ್ಲವೂ ಕಿತ್ತಿ ಒಗೆಯೋದಕ್ಕೆ ಜೋಡೋ ಪಾದಯಾತ್ರೆ ನಡೆದಿದೆ. ದೇಶದಲ್ಲಿ ಹಿಂಸೆಯ ವಾತಾವರಣ ಇದೆ. ಈ ದೇಶದಲ್ಲಿ ಭಾತೃತ್ವದ ವಾತಾವರಣ ನಿರ್ಮಾಣ ಆಗಬೇಕು. ಇಂದಿರಾ ಗಾಂಧಿಯವರು ದೇಶಕ್ಕಾಗಿ ಪ್ರಾಣ ಕೊಟ್ಟರು. ಮುಂದಿನ ದಿನ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
1000 ಕಿಮೀ ಪೂರೈಸಿದ ಯಾತ್ರೆ:
ಇಂದು 1 ಸಾವಿರ ಕಿಲೋಮೀಟರ್ ಪೂರ್ಣಗೊಳಿಸಿದ್ದೇವೆ. ಕಳೆದ 2 ವರ್ಷದಿಂದ ಸಹಕರಿಸಿದ ಎಲ್ಲರಿಗೂ ನಮಸ್ಕಾರಗಳು. ಯಾತ್ರೆಗೆ ಸೋನಿಯಾ ಗಾಂಧಿ ಬಂದು ದಸರಾ ಆಚರಿಸಿದ್ದಾರೆ. ಸೋನಿಯಾ ಗಾಂಧಿ ಭಾಗಿಯಾಗಿ ನಮಗೆಲ್ಲ ಶಕ್ತಿ ನೀಡಿದ್ದಾರೆ. ಅದೊಂದು ಐತಿಹಾಸಿಕ ಹೆಜ್ಜೆ. ನಮ್ಮ ರಾಜ್ಯದ ಪಾಲಿಗೆ ಇದೊಂದು ಸುವರ್ಣ ಅವಕಾಶ. ಈ ಯಾತ್ರೆ 150 ಸ್ಥಾನಗಳನ್ನ ಗೆಲ್ಲಲು ನೆರವಾಗುತ್ತೆ. ಈ ಪಾದಯಾತ್ರೆ ಖರ್ಗೆ, ಡಿಕೆಶಿ ಸಿಎಂ ಆಗುವುದಕ್ಕೆ ಅಲ್ಲ. ನಿಮ್ಮ ಹೆಜ್ಜೆ ದೇಶಕ್ಕೊಂದು ಕೊಡುಗೆ. ಈ ಹೆಜ್ಜೆ ರೈತರ ಬದುಕು, ಉದ್ಯೋಗದ ಸೃಷ್ಟಿಗೆ. ಬಿಜೆಪಿ ತೊಲಗಿಸಲು ನೀವು ಕಾರಣರಾಗಬೇಕು. ವಾಗ್ಧಾನ ನಮ್ಮದು ವಿಶ್ವಾಸ ನಿಮ್ಮದು ಎಂದು ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ಕೊಟ್ಟರು.
ನಮ್ಮ ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ, ಚಿಕ್ಕಮಗಳೂರಿನ ಜನರು ಇಂದಿರಾ ಗಾಂಧಿಯವರನ್ನು ಗೆಲ್ಲಿಸಿದ್ರು. ನಮ್ಮ ತಾಯಿ ಸೋನಿಯಾರನ್ನು ಬಳ್ಳಾರಿ ಜನ ಗೆಲ್ಲಿಸಿದ್ರು. ಕರ್ನಾಟಕದ ಜನತೆಗೆ ನನ್ನ ಧನ್ಯವಾದಗಳು ಪಕ್ಷವನ್ನು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದರು.









0 Comments