ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರೈತ ಸಂಘದ ಅಧ್ಯಕ್ಷರ ಮನೆಯ ಒಳಗೆ ಜನ ನುಸುಳಿ ಕತ್ತಿ ದೊಣ್ಣೆಯಿಂದ ಹಲ್ಲೆ ಮಾಡಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಚಿಕ್ಕಮಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಪದಾಧಿಕಾರಿಗಳು ವೈನ್ ಶಾಪ್ ಮಾಲೀಕರಾದ ಮಂಚೆಗೌಡ ಅವರ ಸಹಚರರಾದ ಮನೋಜ್ ಹಾಗೂ ನಾರಾಯಣ್ ರಾಜ್ ಎಂಬ ಇಬ್ಬರು ಏಕಾಏಕಿ ಕಾಂಪೌಂಡ್ ಗಳನ್ನು ಜೆಸಿಬಿ ಮೂಲಕ ನಾಶಪಡಿಸಿದ್ದು, ರೈತ ಸಂಘದ ಜಿಲ್ಲಾಧ್ಯಕ್ಷರಾದ ದುಗ್ಗಪ್ಪ ಗೌಡ ಅವರು ಬಂದೂಕಿನಿಂದ ಗುಂಡು ಹೊಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಕೊಂಡಿರುವ ಕುರಿತು ಪ್ರಶ್ನಿಸಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮಂಜೂರಾತಿ ರದ್ದುಪಡಿಸುವಂತೆ ಕೋರಿರುವುದರಿಂದ ಈ ರೀತಿಯಾಗಿ ಪ್ರತೀಕಾರವನ್ನು ತೀರಿಸಿಕೊಳ್ಳಲಾಗುತ್ತಿದೆ ಎಂದೂ ಮನವಿಯಲ್ಲಿ ತಿಳಿಸಲಾಗಿದೆ.
ಅಂತೆಯೇ 50 ಜನರನ್ನು ಸೇರಿಸಿಕೊಂಡು ಮನೆಯನ್ನು ನಾಶಮಾಡಲು ಹೊರಟಿರುತ್ತಾರೆ, ಮನೆಯವರನ್ನು ಕೊಲೆ ಮಾಡುವ ಉದ್ದೇಶದಿಂದ ಜೆಸಿಬಿ ಯಂತ್ರಗಳನ್ನು ಉಪಯೋಗಿಸಿದ್ದಾರೆ, ಈ ರೀತಿಯಾಗಿ ಕಾನೂನು ಬಾಹಿರ ಚಟುವಟಿಕೆ ನಡೆಸಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಅಂತೆಯೇ ಜಿಲ್ಲಾಧ್ಯಕ್ಷರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಈ ಕೂಡಲೇ ಹಿಂಪಡೆಯಬೇಕೆಂದು ಕೋರಿದ್ದಾರೆ.








0 Comments