ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತವಿರೋಧಿ ನೀತಿಯನ್ನು ಅವಲಂಭಿಸಿದೆ ಎಂದು ಆರೋಪಿಸಿ ಹಾಗೂ ಈ ಕ್ರಮವನ್ನು ವಿರೋಧಿಸಿ ಅಂತೆಯೇ ಮಲೆನಾಡಿಗರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ನೇತೃತ್ವದಲ್ಲಿ ನಾಳೆ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆಗೆ ಜೆಡಿಎಸ್ ಕರೆ ನೀಡಿದೆ. 

ಅಕ್ಟೋಬರ್ 07 ರ ಶುಕ್ರವಾರ ಬೆಳಗ್ಗೆ 10.30 ಕ್ಕೆ ಕೊಪ್ಪದ ಮೇಲಿನ ಪೇಟೆಯ ಎಂ.ಎಸ್.ದ್ಯಾವೇಗೌಡ ಸ್ಮಾರಕ ಮಹಾದ್ವಾರದಿಂದ ಜೆಡಿಎಸ್ ಕಾರ್ಯಕರ್ತರ ಬೃಹತ್ ಪ್ರತಿಭಟನಾ ಜಾಥಾವು ಕೊಪ್ಪ ಬಸ್ ನಿಲ್ದಾಣದ ವರೆಗೆ ಸಾಗಲಿದೆ.

ಇದನ್ನೂ ಓದಿ: ಹತ್ತಾರು ಕನಸು ಹೊತ್ತಿದ್ದ ಕಾಫಿನಾಡ ಕಬ್ಬಡಿ ಕ್ರೀಡಾಪಟು ಪ್ರತಾಪ್ ಕ್ಯಾನ್ಸರ್ ಗೆ ಬಲಿ!


ಪ್ರತಿಭಟನಾ ಜಾಥಾದ ನಂತರ ಕೊಪ್ಪದ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಮಲೆನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗುವುದಾಗಿಯೂ ತಿಳಿಸಿದರು.

ಈ ಭಾಗದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಕೊಳೆ ರೋಗಕ್ಕೆ ತುತ್ತಾಗಿರುವ ಅಡಿಕೆ ಬೆಳೆಗೆ ಎಕರೆಗೆ ಕನಿಷ್ಠ 50 ಸಾವಿರ, ಕಾಫಿಗೆ 25 ಸಾವಿರ ಹಾಗೂ ಭತ್ತಕ್ಕೆ 15 ಸಾವಿರ ಪರಿಹಾರ ಘೋಷಿಸಬೇಕು. ಅಡಿಕೆ ಎಲೆಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಲೆನಾಡಿನ‌ ಕೇಂದ್ರ ಸ್ಥಾನವಾದ ಕೊಪ್ಪದಲ್ಲಿ ಅಡಿಕೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಬೇಕು. ಕೇವಲ‌ ಕಾರ್ ಹೊಂದಿದ್ದಾರೆ ಎಂಬ ಕಾರಣಕ್ಕೆ ಬಡ ಕೂಲಿ‌ ಕಾರ್ಮಿಕರಿಂದ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳಲಾಗುತ್ತಿದೆ, ಇಂತಹ ಅಮಾನವೀಯ ನಿರ್ಧಾರವನ್ನು ಸರ್ಕಾರ ಈ ಕೂಡಲೇ ವಾಪಸ್ ಪಡೆಯಬೇಕು, ಕಂದಾಯ ಜಮೀನಿನ 94 ಸಿ ಮತ್ತು ಫಾರಂ ನಂ.53 ಅರ್ಜಿ‌ ವಿಲೇವಾರಿಗೆ ಅರಣ್ಯ ಇಲಾಖೆಯ ಅಭಿಪ್ರಾಯ ಕೇಳುತ್ತಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಹಾಗೂ ಸೊಪ್ಪಿನ‌ಬೆಟ್ಟ ಹಾಗೂ ಗೋಮಾಳ ಜಾಗದಲ್ಲಿ 94 ಸಿ ಹಕ್ಕು ಪತ್ರ ನೀಡಲು ವಿಫಲವಾದ ಸರ್ಕಾರದ ವೈಫಲ್ಯತೆಯನ್ನು ವಿರೋಧಿಸಿ ನಾಳೆ ಜೆಡಿಎಸ್ ಪ್ರತಿಭಟನೆ ನಡೆಸಲಿದೆ. 



ಸರ್ಕಾರ ಕೂಡಲೇ ಎಚ್ಚೆತ್ತು ಮಲೆನಾಡಿಗರಿಗೆ ಎದುರಾಗಿರುವ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂಬುದಾಗಿ ಪದಾಧಿಕಾರಿಗಳು ಆಗ್ರಹ ವ್ಯಕ್ತಪಡಿಸಿ ನಾಳಿನ ಪ್ರತಿಭಟನೆ ನಡೆಸಲಿದ್ದು, ಕೃಷಿಕರು ಹಾಗೂ ಮಲೆನಾಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.