ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾರ್ವೆ ಶಾಲೆ ತಂಡವು ನರಸಿಂಹರಾಜಪುರ ತಾಲೂಕಿನ ಮಡಬೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಖೋ ಖೋ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಜಯಗಳಿಸುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಈ ಮೂಲಕ ವಿಭಾಗದಲ್ಲಿ ಸ್ಪರ್ಧಿಸಲಿದೆ.
ಈ ಶಾಲೆಯು ಹಲವಾರು ವರ್ಷದಿಂದ ಖೋ ಖೋ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟವನ್ನು ಪ್ರವೇಶಿಸುತ್ತಿತ್ತು, ಆದರೆ ಈ ಬಾರಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವುದು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂತಸ ತಂದಿದ್ದರೆ, ಶಿಕ್ಷಕ ವೃಂದ ಹಾಗೂ ಪೋಷಕರು ಸಹ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ನಾರ್ವೆಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಚಟುವಟಿಕೆಗೆ ಅಗತ್ಯವಾದ ಸೌಕರ್ಯಗಳು ಇಲ್ಲದೆ ಇದ್ದರೂ, ವಿದ್ಯಾರ್ಥಿಗಳ ಕೊರತೆ ಇದ್ದರು ದೈಹಿಕ ಶಿಕ್ಷಕ ಗಜೇಂದ್ರರವರು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ಈ ಶಾಲೆಯ ವಿಶೇಷವಾಗಿದೆ. ಗಜೇಂದ್ರರವರು ಈ ಹಿಂದೆ ಹಲವಾರು ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮುವಲ್ಲಿ ಕಾರಣೀಕರ್ತರಾಗಿದ್ದಾರೆ.
ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುವ ವಿದ್ಯಾರ್ಥಿಗಳಿಗೆ ಮುಖ್ಯಶಿಕ್ಷಕರಾದ ಗಿರಿಜಾ ಶಿಕ್ಷಕರಾದ ಶಂಕರಪ್ಪ ,ಶಿಕ್ಷಕಿ ಶಬೀನಾ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹಾಬಲೇಶ್ ಮತ್ತು ಸದಸ್ಯರುಗಳು ಹಾಗೂ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಈ ಶಾಲೆಯ ವಿದ್ಯಾರ್ಥಿಗಳು ಮಾಡುವಂತಾಗಲಿ ಎಂದು ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.









0 Comments