ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಇನೋವಾ ಕಾರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೀಕೆರೆ ಸಮೀಪದ ಸೇಂಟ್ ನಾರ್ಬರ್ಟ್ ಶಾಲೆ ಸಮೀಪ ಈ ರಸ್ತೆ ಅಪಘಾತ ಸಂಭವಿಸಿದ್ದು, ಬುಲೆಟ್ ಬೈಕ್ ಚಾಲನೆ ನಡೆಸುತ್ತಿದ್ದ ಚಾಲಕ ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 


ತರೀಕೆರೆ ಮೂಲದ ಪ್ರವಾಸಿಗರಿದ್ದ ಇನೋವಾ ಕಾರು ಶೃಂಗೇರಿ ಕಡೆಗೆ ತೆರಳುತ್ತಿತ್ತು ಎನ್ನಲಾಗಿದ್ದು ಹಿರೀಕೆರೆ ಎಸ್.ಎಂ.ಕೆ ಹಾರ್ಡ್ ವೇರ್ ಉದ್ಯೋಗಿ ಹರಿಹರಪುರದ ನಿವಾಸಿ ಅಶೋಕ್ ಈ ಅಪಘಾತದಲ್ಲಿ ಗಾಯಕ್ಕೀಡಾದ ಯುವಕ. 

ಯುವಕನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಕೊಪ್ಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


ಗಜಲಕ್ಷ್ಮಿ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸುತ್ತಿರುವ ಜಗನ್ಮಾತೆ ಶಾರದೆ: 

ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವವು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಇಂದು ದೇವಿ ಗಜಲಕ್ಷ್ಮಿ ಅಲಂಕಾರದಲ್ಲಿ ಶೋಭಿಸುತ್ತಿದ್ದಾಳೆ. 

ಇಂದು ವಿಜಯದಶಮಿಯ ಪ್ರಯುಕ್ತ ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ದೇವಿಯು ಪದ್ಮದ ಮೇಲೆ ಕುಳಿತು ಅಕ್ಕಪಕ್ಕದಲ್ಲಿ ಎರಡು ಗಜಗಳಿಂದ ನಮಸ್ಕರಿಸಲ್ಪಡುತ್ತಾ, ಭಕ್ತಾದಿಗಳಿಗೆ ಮಂದಸ್ಮಿತ ವದನೆಯಾಗಿ ವರಗಳನ್ನು ಕರುಣಿಸುವ ಮಾತೆಯಾಗಿ ಕಂಗೊಳಿಸುತ್ತಿದ್ದಾಳೆ ಜಗನ್ಮಾತೆ ಶಾರದೆ. 



ಇಂದು ಶೃಂಗೇರಿಯ ಕಾಳಿಕಾಂಬ ದೇವಸ್ಥಾನಕ್ಕೆ ಸಂಜೆಯ ಬೀದಿ ಉತ್ಸವ ತೆರಳಲಿದ್ದು, ಅಲ್ಲಿನ ಬನ್ನಿ ಮಂಟಪಕ್ಕೆ ಹಾಗೂ ಕಾಳಿಕಾಮಾತೆಯ ದೇಗುಲದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಬನ್ನಿ ತರಲಾಗುವುದು. 

ನಾಳೆ ಗಜಲಕ್ಷ್ಮಿ ಅಲಂಕಾರದಲ್ಲಿ ದೇವಿಯ ಮಹಾರಥೋತ್ಸವ ಶೃಂಗೇರಿಯ ಭಾರತೀ ಬೀದಿಯಲ್ಲಿ ಜರುಗಲಿದ್ದು, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಹ ನಡೆಯಲಿದೆ. ವಿವಿಧ ಕಲಾ ತಂಡಗಳು, ಭಜನಾ ತಂಡಗಳು ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ.