ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಚ್ಚ ಹಸಿರಿನ ಪ್ರಕೃತಿಯ ಮಡಿಲಿನಲ್ಲಿರುವ ಚಂದ್ರದ್ರೋಣ ಪರ್ವತಗಿರಿ ಶ್ರೇಣಿಯ ಚಿಕ್ಕಮಗಳೂರು ಜಿಲ್ಲೆಯ ದೇವಿರಮ್ಮನ ಬೆಟ್ಟದಲ್ಲಿ ನೆಲೆಸಿರುವ ಶ್ರೀ ದೇವಿರಮ್ಮನವರ ದೀಪೋತ್ಸವ ಕಾರ್ಯಕ್ರಮ ಈ ಬಾರಿ ಅಕ್ಟೋಬರ್ 23 ರಿಂದ 27 ರವರೆಗೆ ನಡೆಯಲಿದೆ. 

ದೇವಿಯ ದರ್ಶನವನ್ನು ಪಡೆಯುವ ಸಲುವಾಗಿ ಅನೇಕ ಸಂಖ್ಯೆಯಲ್ಲಿ ಭಕ್ತರು ಪ್ರತಿ ಬಾರಿಯೂ ಆಗಮಿಸಲಿದ್ದು, ಚಾರಣ ಮಾಡುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ದೇವಿಯ ದರ್ಶನವನ್ನು ಅಪಾರ ಸಂಖ್ಯೆಯ ಭಕ್ತವರ್ಗ ನಡೆಸಲಿದೆ.

ಇದನ್ನೂ ಓದಿ: ಅಕ್ರಮ ವಲಸಿಗರ ಪತ್ತೆಗಾಗಿ ಹೊಸ ತಂತ್ರಾಂಶ ರೂಪಿಸಿದ ಜಿಲ್ಲಾಡಳಿತ | ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವೆಬ್ ಪೋರ್ಟಲ್ ಅಭಿವೃದ್ದಿ


ಕಳೆದ ಮೂರು ವರ್ಷಗಳಿಂದ ಕೋವಿಡ್ ಸೋಂಕಿನ ಆರ್ಭಟ ಹಾಗೂ ಹರಡುವ ಭೀತಿ ಇರುವುದರಿಂದ ಜಿಲ್ಲಾಡಳಿತ ದೇವೀರಮ್ಮನ ಬೆಟ್ಟ ಹತ್ತುವುದಕ್ಕೆ ನಿರ್ಬಂಧಿಸಿತ್ತು. ಈ ಬಾರಿ ಕೋವಿಡ್ ಕಾರ್ಮೋಡ ಸರಿದು ಎಲ್ಲಾ ಹಬ್ಬ, ಹರಿದಿನಗಳ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಈ ಬಾರಿ ದೇವಿರಮ್ಮನ ದೀಪೋತ್ಸವ ಭಕ್ತಿ ಭಾವಗಳಿಂದ, ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. 

ಈ ಬಾರಿ ದೇವೇರಮ್ಮನ ದರ್ಶನ ಪಡೆಯುವ ಸಲುವಾಗಿ 80 ರಿಂದ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದ್ದು, ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕೆ.ಎನ್.ರಮೇಶ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ದೇವೀರಮ್ಮನವರ ದೇವಾಲಯದ ದೀಪಾವಳಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಚಿಕ್ಕಮಗಳೂರು ತಾಲ್ಲೂಕು ಬಿಂಡಿಗಾ ಗ್ರಾಮದ ಶ್ರೀ ದೇವೀರಮ್ಮನವರ ದೇವಾಲಯದ ದೀಪಾವಳಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಅಕ್ಟೋಬರ್ 23ರಿಂದ 27ರವರೆಗೆ ನಡೆಯಲಿದ್ದು, ಸುಮಾರು 80 ಸಾವಿರದಿಂದ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಅಕ್ಟೋಬರ್ 23ರಂದು ದೇವಾಲಯಕ್ಕೆ 400 ವಾಹನಗಳು ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ವಾಹನ ಸಂಚರಿಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಜಾತ್ರಾ ಮಹೋತ್ಸವದ ಪ್ರಯುಕ್ತ KSRTC ವತಿಯಿಂದ ದೇವಾಲಯಕ್ಕೆ ಭಕ್ತಾದಿಗಳು ತೆರಳಲು 125 ಬಸ್ಸುಗಳ ವ್ಯವಸ್ಥೆ ಮಾಡಬೇಕು, ಮೆಸ್ಕಾಂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಮತ್ತು ಆರೋಗ್ಯ ಇಲಾಖೆ ಸುರಕ್ಷತಾ ಸಿದ್ಧತೆ ಮತ್ತು ಕ್ರಮಗಳನ್ನು ಕೈಗೊಳ್ಳಲು ಹಾಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಮತ್ತು ಮಲ್ಲೇನಹಳ್ಳಿ ಗ್ರಾ.ಪಂಚಾಯತ್ ದೇವಾಲಯ ಮತ್ತು ಬೆಟ್ಟದ ಸುತ್ತಮುತ್ತ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು, ಸ್ವಚ್ಛತಾ ಕಾರ್ಯಗಳಿಗೆ ನಗರಸಭೆಯ ವತಿಯಿಂದ 10 ಸ್ವಚ್ಛತಾ ವಾಹನಗಳನ್ನು ಒದಗಿಸುವಂತೆ ಸೂಚಿಸಿದರು.ಬೆಟ್ಟದ ಮೂರು ಭಾಗಗಳಲ್ಲಿ ಹಾಗೂ ಆಸ್ಪತ್ರೆಯಲ್ಲಿ ಆಂಬುಲೆನ್ಸ್, ತಜ್ಞ ವೈದ್ಯರು ಮತ್ತು ಹೆಚ್ಚುವರಿ ವೈದ್ಯರು ಹಾಗೂ ಇತರ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು. ದೇವಾಲಯಕ್ಕೆ ಹೋಗುವ ರಸ್ತೆಗಳನ್ನು ಅತೀ ಶೀಘ್ರವಾಗಿ ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ದೇವಿಯ ಸನ್ನಿಧಿಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ: 

ಅಕ್ಟೋಬರ್ 24 ರಂದು ಬೆಳಿಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜಾ ಪ್ರಾರಂಭ ರಾತ್ರಿ 7 ಘಂಟೆಗೆ ದೀಪೋತ್ಸವ ನಡೆಯಲಿದೆ. ಅಕ್ಟೋಬರ್ 25ರಂದು ಬೆಳಿಗ್ಗೆ 8.45 ಘಂಟೆಗೆ ಶ್ರೀ ದೇವಿರಮ್ಮನ ದೇವಸ್ಥಾನದಲ್ಲಿ ಶ್ರೀ ದೇವಿಯವರಿಗೆ ಉಡುಗೆ ಪೂಜೆ, ಸಂಜೆ ಬೆಣ್ಣೆ ಬಟ್ಟೆ ಸುಡುವುದು, ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಅಕ್ಟೋಬರ್ 26ರಂದು ರಾತ್ರಿ ದೇವಿ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಪೂಜೆ, ಪುನ್ಯಾಹ, ಅಗ್ನಿಕುಂಡ ಪೂಜೆ, ಕಳಸ ಸ್ಥಾಪನೆ, ಕುಂಕುಮಾರ್ಚನೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆಯಲಿದೆ. ಅಕ್ಟೋಬರ್ 27 ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥ, ಪ್ರಸಾದ ವಿತರಣೆ ನಡೆಯಲಿದೆ.

ಎಂದಿನಂತೆಯೇ ಈ ಬಾರಿ ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದು, ಪೊಲೀಸರು, ಸ್ವಯಂ ಸೇವಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ನೀಡಲಿದ್ದಾರೆ.