ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಹಿಂದೂಗಳು ಹೆಚ್ಚಿರುವ ಸ್ಥಳಗಳಲ್ಲಿ ಬಾಂಬ್ ದಾಳಿ ನಡೆಸಬೇಕು ಎಂದು ಫೋನ್ ಮೂಲಕ ಸಂವಹನ ನಡೆಸಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಸೆರೆಹಿಡಿದು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ.

ಪೆಟ್ರೋಲ್ ಬಾಂಬ್ ಆಡಿಯೋ ಹೊರಬರುತ್ತಿದ್ದಂತೆ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದ್ದು, ಕಾವೇರಿ ತೀರ್ಥೋದ್ಭವದ ಹಿನ್ನೆಲೆ ತಲಕಾವೇರಿ ಮತ್ತು ಭಾಗಮಂಡಲ ಭಾಗದಲ್ಲಿ ಪೊಲೀಸರು ಹೆಚ್ಚಿನ ಭದ್ರತೆಯನ್ನು ಕೈಗೊಂಡಿದ್ದಾರೆ. ತೀರ್ಥೋದ್ಭವಕ್ಕೆ ಸಾವಿರಾರು ಭಕ್ತರು ಬರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಲ್ಲಿ ತಪಾಸಣಾ ಕಾರ್ಯನಡೆಯುತ್ತಿದೆ.

ಇದನ್ನೂ ಓದಿ: ಕೊಪ್ಪ: ವಾಕಿಂಗ್ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತ | ಶೃಂಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿದ್ದ ನಾಗರಾಜ್ ದುರ್ಮರಣ


ಇಂದು ಆರೋಪಿಗಳಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ನ್ಯಾಯಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಆಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶನಿವಾರ ಆರೋಪಿಗಳಾದ ಮುಸ್ತಫಾ, ಅಬ್ದುಲ್ಲಾ ಅವರನ್ನು ಪೊಲೀಸರು ಬಂಧಿಸಿದ್ದರು. ಇಂದು ಜಿಲ್ಲೆಗೆ ಎನ್​ಐಎ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

ರಿಯಲ್ ಎಸ್ಟೇಟ್ ವ್ಯವಹಾರಸ್ಥನಿಂದ ಬೆಳಕಿಗೆ ಬಂದ ಘಟನೆ: 

ಏಪ್ರಿಲ್‌ 25ರ ಮಧ್ಯಾಹ್ನ 2.15ರ ಸುಮಾರಿಗೆ ಬಹುಕಾಲದ ಗೆಳೆಯರೂ, ಕಾಮಗಾರಿ ಮತ್ತು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಆತ್ಮೀಯರೂ ಆಗಿದ್ದ ಶೇಷಪ್ಪ ಬಿ.ಎನ್‌ ಅವರು ಅಬ್ದುಲ್ಲಾ ಅವರಿಗೆ ಕರೆ ಮಾಡಿದ್ದರು, ಆಗ ಅಬ್ದುಲ್ಲಾ ಅವರು ಫೋನ್‌ನಲ್ಲಿ ಒಂದೆರಡು ಬಾರಿ ಹಲೋ ಹಲೋ ಎಂದಿದ್ದರು. ಆದರೆ, ಸರಿಯಾಗಿ ಕನೆಕ್ಟ್‌ ಆಗಿಲ್ಲ ಎಂದು ತಿಳಿದು ಇನ್ನೊಂದು ಫೋನ್‌ನಲ್ಲಿ ಮಾತುಕತೆ ಮುಂದುವರಿಸಿದ್ದರು. ಆದರೆ, ಶೇಷಪ್ಪ ಅವರಿಗೆ ಮತ್ತೊಂದು ಕರೆ ಚೆನ್ನಾಗಿ ಕೇಳಿಸುತ್ತಿತ್ತು. ಅದರಲ್ಲಿ ಮಡಿಕೇರಿ ನಗರಕ್ಕೆ ಬಾಂಬ್‌ ಹಾಕುವ ಯೋಜನೆಯ ಬಗ್ಗೆ ಚರ್ಚೆ ನಡೆದಿತ್ತು. 


ಈ ವಿಷಯವನ್ನು ಕೆಲವು ಸಮಯದಿಂದ ಯಾರಲ್ಲಿ ಹೇಳಬೇಕು ಎಂದು ತಿಳಿಯದೆ ಶೇಷಪ್ಪ ಸುಮ್ಮನಿದ್ದರು. ಆದರೂ ಏನಾದರೂ ಅವಘಡ ಸಂಭವಿಸಿಬಿಟ್ಟರೆ ತಾನು ಗೊತ್ತಿದ್ದೂ ಸುಮ್ಮನಿದ್ದಂತಾಗುತ್ತದೆ ಎಂದು ಭಾವಿಸಿ ಇತ್ತೀಚೆಗೆ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮಡಿಕೇರಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಮಡಿಕೇರಿ ನಗರಸಭಾ ಸದಸ್ಯ ಮುಸ್ತಫಾ ಮತ್ತು ಬೆಟ್ಟಗೇರಿ ಅಬ್ದುಲ್ಲಾ‌ ಅವರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮಡಿಕೇರಿ ನಗರದ ಮೇಲೆ ಪೆಟ್ರೋಲ್ ಬಾಂಬ್ ಹಾಕುವ ಸಂಚಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಮಲಯಾಳಂ ಭಾಷೆಯಲ್ಲಿ ಪೆಟ್ರೋಲ್‌ ಬಾಂಬ್‌ ಹಾಕುವ ಬಗ್ಗೆ ಆರೋಪಿಗಳಿಬ್ಬರೂ 3 ನಿಮಿಷದ ಕಾಲ ಮಾತನಾಡಿರುವ ಆಡಿಯೋ ವೈರಲ್‌ ಆಗಿದೆ. ಇವರ ಸಂಭಾಷಣೆಯಲ್ಲಿ ಕೊಡಗಿನ 50ಕ್ಕೂ ಅಧಿಕ ಸ್ಥಳಗಳಲ್ಲಿ ಪೆಟ್ರೋಲ್‌ ಬಾಂಬ್‌ ಹಾಕುವ ಬಗ್ಗೆ ಮಾತನಾಡಿದ್ದಾರೆ. 



ಹಿಂದೂಗಳು ಜಾಸ್ತಿ ಸೇರುವ ಜಾಗದಲ್ಲಿ ಪೆಟ್ರೋಲ್ ಬಾಂಬ್ ಹಾಕಬೇಕು. ಹಿಂದು ನಾಯಿಗಳನ್ನು‌ ನಾವು ಸುಮ್ಮನೆ ಬಿಡಬಾರದು, ಪೆಟ್ರೋಲ್ ಬಾಂಬ್ ಹಾಕಿ ಹಿಂದುಗಳನ್ನು ಕೊಲ್ಲಬೇಕು. ಆ ಮೂಲಕ ಇಡೀ ಮಡಿಕೇರಿ ನಗರ ಹೊತ್ತಿ ಉರಿಯುವಂತೆ ಮಾಡಬೇಕು. ನಾವು ಸತ್ತರೂ ಪರವಾಗಿಲ್ಲ ಹಿಂದೂಗಳನ್ನ ಬಿಡಬಾರದು. ಎಷ್ಟೇ ಹಣ ಖರ್ಚಾದರೂ ತೊಂದರೆ ಇಲ್ಲ, ನಾವೆಲ್ಲ ಸೇರಿ ಅದಕ್ಕೆ ಬೇಕಾಗುವ ಹಣ ಹೊಂದಿಸಬೇಕು ಎಂದು ಮಲಯಾಳಂನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

ಘಟನಾ ಸಂಬಂಧ ಹೆಚ್ಚಿನ ತನಿಖೆ ಹಾಗೂ ವಿಚಾರಣೆ ನಡೆಯುತ್ತಿದ್ದು ಆರೋಪಿಗಳಿಗೆ ಶಿಕ್ಷೆಯಾಗುವಂತೆ ಅಂತೆಯೇ ಈ ಕೃತ್ಯದ ಹಿಂದಿರುವ ಸಂಚುಕೋರರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.