ಹಾಸನ: (ನ್ಯೂಸ್ ಮಲ್ನಾಡ್ ವರದಿ) ವ್ಯಕ್ತಿಯನ್ನು ಕೊಲೆ ಮಾಡಿ ಶವವನ್ನು ಎಸೆಯಲು ಬಂದಿದ್ದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಹಾಸನದ ಶಾಂತಿಗ್ರಾಮ ಬಳಿಯ ರೈಲ್ವೆ ಹಳಿ ಮೇಲೆ ಶವವನ್ನು ಎಸೆಯಲು ಬಂದಿದ್ದ ವೇಳೆ ಬೊಲೆರೊ ವಾಹನದೊಂದಿಗೆ ಉರುಳಿ ಬಿದ್ದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಾಹನದಲ್ಲಿದ್ದ ಶವ ಆನಂದ್ ಎಂಬುವವರದ್ದು ಎಂದು ಗುರುತಿಸಲಾಗಿದೆ.
ಆನಂದ್ ಶಾಂತಿಗ್ರಾಮದ ಗಾಡೇನಹಳ್ಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿಗಳು ಡಾಬಾ ಪಕ್ಕದ ಪ್ರದೇಶದ ನಿವಾಸಿಗಳೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಪೊಲೀಸರ ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತಾದ ಪೂರ್ಣ ಮಾಹಿತಿ ಹೊರಬೀಳಲಿದೆ.
ಆಂಧ್ರಪ್ರದೇಶದ ಮೆಹಬೂಬನಗರದ ರಘು, ಗದಗ ಜಿಲ್ಲೆಯ ಶಶಿ, ಹೊಸಕೋಟೆಯ ರವಿಕುಮಾರ್, ಬಾಗಲಕೋಟೆಯ ರಾಜಾ ಪಾಷಾ ಬಂಧಿತ ಆರೋಪಿಗಳು. ಕಾರಿನಲ್ಲಿದ್ದ ಮೊದಲ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ನೀಡಿದ ಮಾಹಿತಿಯಂತೆ ರಾಜಾ ಪಾಷಾನನ್ನು ಬಂಧಿಸಲಾಗಿದೆ.
ಆರೋಪಿಗಳು ಮೃತದೇಹವನ್ನು ಕಾರಿನಲ್ಲಿ ತಂದು, ರೈಲ್ವೆ ಹಳಿಯ ಮೇಲೆ ಎಸೆಯಲು ಪ್ರಯತ್ನಿಸುತ್ತಿದ್ದರು. ಆ ವೇಳೆ ಮೇಲಿನಿಂದ ಉರುಳಿದ ಕಾರು, ಶವದ ಸಮೇತ ಹಳಿಯ ಮೇಲೆ ಬಿದ್ದಿತ್ತು. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಕಾರಿನಲ್ಲಿ ಸಿಲುಕಿದ್ದ ಆರೋಪಿಗಳನ್ನು ವಶಕ್ಕೆ ಪಡೆದರು ಎನ್ನಲಾಗಿದ್ದು ಶಾಂತಿಗ್ರಾಮ ಠಾಣೆಯಲ್ಲಿ ಘಟನಾ ಸಂಬಂಧ ಪ್ರಕರಣ ದಾಖಲಾಗಿದೆ.
ಕೃತ್ಯದ ಹಿಂದಿರುವ ಉದ್ದೇಶ ಘಟನೆಗೆ ಕಾರಣಗಳೇನು ಎಂಬುದರ ಕುರಿತಾಗಿ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.








0 Comments