ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿರುವ ಅಕ್ರಮ ವಲಸಿಗರನ್ನು, ಕಾರ್ಮಿಕರನ್ನು ಪತ್ತೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ನಿನ್ನೆ ಸಭೆ ನಡೆಯಿತು. 

ಜಿಲ್ಲೆಯ ವಿವಿಧ ಕಾಫಿ ಹಾಗೂ ಟೀ ತೋಟಗಳಲ್ಲಿ ಕೆಲಸ ಮಾಡುತ್ತಿರುವ ರಾಜ್ಯ ಹಾಗೂ ಹೊರರಾಜ್ಯಗಳ ವಲಸೆ ಕಾರ್ಮಿಕರ ಮೇಲೆ ನಿಗಾವಹಿಸುವ ಸಲುವಾಗಿ ಅಂತೆಯೇ ಮುಂದಿನ ದಿನಗಳಲ್ಲಿ ಬರುವ ವಲಸೆ ಕಾರ್ಮಿಕರುಗಳ ಮಾಹಿತಿಯನ್ನು ಗಣಕೀಕೃತವಾಗಿ ನೊಂದಾಯಿಸುವ ಮತ್ತು ಕಾರ್ಮಿಕರು ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ, ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಸಂದರ್ಭದಲ್ಲಿ ಅವರನ್ನು ಪತ್ತೆ ಹಚ್ಚಲು ಅನುಕೂಲಕರವಾಗುವಂತೆ, ಅಂತೆಯೇ ಇತರೆ ದೇಶಗಳ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ಜಿಲ್ಲಾಡಳಿತದ ವತಿಯಿಂದ ಸಭೆ ನಡೆಯಿತು.

ಇದನ್ನೂ ಓದಿ: ಚಿಕ್ಕಮಗಳೂರು: ಡ್ರಿಂಕ್ ಆಂಡ್ ಡ್ರೈವ್ ಗೆ ಬಿತ್ತು ದಂಡ, ಸಿಟ್ಟಿಗೆದ್ದು ಜಡ್ಜ್ ಕಡೆಗೆ ಚಪ್ಪಲಿ ತೂರಿದ ಕುಡುಕ ಮಹಾಶಯ


ತಂತ್ರಾಂಶಕ್ಕಾಗಿ ರಾಜ್ಯದಲ್ಲೇ ಪ್ರಥಮ ಪೋರ್ಟಲ್ ಅಭಿವೃದ್ದಿ :

ರಾಜ್ಯದಲ್ಲಿಯೇ ಪ್ರಥಮವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 'karmika'  ಎಂಬ ತಂತ್ರಾಂಶದಲ್ಲಿ ಪ್ರತ್ಯೇಕವಾದ ವೆಬ್ ಪೋರ್ಟಲ್‌ನ್ನು ಅಭಿವೃದ್ಧಿಪಡಿಸಿದ್ದು, ಈ ಸುರಕ್ಷಿತವಾದ ತಂತ್ರಾಂಶ ಬಳಸಿಕೊಂಡು, ತೋಟದ ಮಾಲೀಕರು, ಕಾರ್ಮಿಕರು, ಜಿಲ್ಲಾಡಳಿತ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬಹುದೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ತಂತ್ರಾಂಶವು ಬಹಳ ಮಹತ್ವದ್ದಾಗಿದ್ದು, ವೆಬ್ ಪೋರ್ಟಲ್‌ನಲ್ಲಿ ಕಾಫಿ ಅಥವಾ ಚಹಾ ತೋಟದ ಮಾಲೀಕರ ವಿವರ, ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ವಿವರ ಅಂದರೆ ಫೋಟೋ, ವಿಳಾಸ ಹಾಗೂ ಇತರೆ ಮಾಹಿತಿ ನೊಂದಾಯಿಸಬೇಕು. ಈ ವೆಬ್ ಪೋರ್ಟಲ್ ನ ಸಾಧಕ ಭಾದಕಗಳ ಬಗ್ಗೆ ಹಾಗೂ ವೆಬ್ ಪೋರ್ಟಲ್‌ನಲ್ಲಿ ಹೆಚ್ಚುವರಿಯಾಗಿ ಅಳವಡಿಸಬೇಕಾದ ಕ್ರಮಗಳ ಬಗ್ಗೆ ಸಭೆಯ ವೇಳೆ ಚರ್ಚಿಸಲಾಯಿತು.


ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬೆಳೆಗಾರರ ಕುಂದು ಕೊರತೆಗಳನ್ನು ಅಂತೆಯೇ ಅವಶ್ಯವಿರುವ ಅಗತ್ಯತೆಗಳ ಕುರಿತು ಮಾಹಿತಿ ಕಲೆಹಾಕಿದರು.

ಈ ಸಭೆಯಲ್ಲಿ  ಜಿಲ್ಲಾ ಮಾಹಿತಿ ಅಧಿಕಾರಿ ಎಸ್. ಕೃಷ್ಣ ಕಿರಣ್,  ಕಾಫಿ ಮಂಡಳಿ ಉಪನಿರ್ದೇಶಕರಾದ ಡಿ.ಹೆಚ್. ಶ್ರೀನಿವಾಸ್, ಚಿಕ್ಕಮಗಳೂರು ಕಾರ್ಮಿಕ ಅಧಿಕಾರಿ ಗಿರಿಜಾ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಕಾಫಿ, ಚಹಾ ತೋಟದ ಮಾಲಿಕರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.