ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಈ ಹಿಂದೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿ ಆತನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಮನೆಯ ಮುಂಭಾಗಕ್ಕೆ ಬಿಟ್ಟು ಹೋಗಿದ್ದ ಪ್ರಕರಣ ಸಂಭವಿಸಿತ್ತು. ಈ ಕುರಿತು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯಲ್ಲಿ ಸೆ.25 ರಂದು ಬೆಳ್ಳಿಕೋಡಿಗೆ ಗ್ರಾಮದಲ್ಲಿ ರಾಜು ಎಂಬ ವ್ಯಕ್ತಿ ಕೋಳಿ ಅಂಗಡಿಯ ಬಳಿ ಕೋಳಿ ಕದಿಯಲು ಬಂದಿದ್ದಾನೆ ಎಂಬುದಾಗಿ ಆರೋಪಿಸಿ ಶಿಶಿರ, ವಿಜಯೇಂದ್ರ ಮತ್ತು ಶಿವು ಎಂಬುವರು ಕೈಕಾಲು ಕಟ್ಟಿಹಾಕಿ ದೊಣ್ಣೆಗಳಿಂದ ಹಲ್ಲೆ ನಡೆಸಿ, ನಂತರ ಬೈಕ್ ನಲ್ಲಿ ಕರೆದುಕೊಂಡು ಬಂದು ಮನೆಯ ಮುಂದೆ ಬಿಟ್ಟುಹೋಗಿರುತ್ತಾರೆ.
ಮನೆಯ ಮುಂದೆ ಬಿದ್ದಿದ್ದ ರಾಜು ನಿತ್ರಾಣನಾಗಿ ಜೋರಾಗಿ ಕಿರುಚಿಕೊಂಡಾಗ ಹೆಂಡತಿ ಪುಷ್ಪಲತಾ ಮತ್ತು ಮಗಳು ಪೂರ್ಣಿಮಾ ಉಪಚರಿಸುತ್ತಾರೆ, ಮಗ ಸಂದೇಶನ ಬಳಿ ಘಟನೆಯನ್ನ ವಿವರಿಸಿದ ರಾಜು ಕುಡಿಯಲು ನೀರು ಕೊಡು ಎಂದು ಕೇಳಿದ್ದಾನೆ. ನೀರು ತರುವಷ್ಟರಲ್ಲಿ ರಾಜು ಕೊನೆಯುಸಿರೆಳೆದಿದ್ದರು.
ಈ ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನು ಮಾಳೂರು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಶಿಶಿರ, ಶಿವು, ವಿಜೇಂದ್ರ ಮತ್ತು ಸತೀಶ್ ಎಂದು ಗುರುತಿಸಲಾಗಿದೆ. ಸತೀಶ್ ಎಂಬಾತ ಈ ಮೂವರೊಂದಿಗೆ ಇದ್ದ ಎಂಬ ಕಾರಣಕ್ಕೆ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸಂಪೂರ್ಣ ತನಿಖೆಯ ನಂತರ ಘಟನಾ ಸಂಬಂಧ ಸಂಪೂರ್ಣ ಮಾಹಿತಿ ಹೊರಬೀಳಲಿದೆ.






0 Comments