ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮನೆಯ ಹಿತ್ತಲಿನಲ್ಲಿ ಗಂಜಾವನ್ನು ಬೆಳೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಬ್ರಾಹ್ಮಣರ ಬೀದಿಯ ವಾಸಿ ಭರತ್ ರಾಮ್ ಮತ್ತು ಶತ್ರುಘ್ನರಾಮ್ ಎಂಬ ಇಬ್ಬರು ಆರೋಪಿಗಳು ಬಂಧಿತರು. ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡ ಬೆಳೆಸಿರುವ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಭರತ್ ರಾಮ್ ಎಂಬ 31 ವರ್ಷದ ಆರೋಪಿಯನ್ನು ಮತ್ತು ಶತ್ರುಘ್ನರಾಮ್ ಎಂಬಾತನನ್ನು ವಿಚಾರಿಸಿ ಈ ಕುರಿತು ಮಾಹಿತಿ ಪಡೆದಾಗ ಅವರುಗಳು ಉಪಯೋಗಿಸಲು ಗಾಂಜಾಗಿಡ ಬೆಳೆದಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದು ಈ ಇಬ್ಬರಿಂದ 710 ಗ್ರಾಂ ಗಾಂಜಾ ಗಿಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಡಿ.ಎನ್ ಜೀವರಾಜ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ; ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಪದಾಧಿಕಾರಿಗಳು 


ಈ ಕಾರ್ಯಾಚರಣೆಯು ಲಿಂಗದಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ನೇತೃತ್ವದ ತಂಡ ನಡೆಸಿದ್ದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಯುವಜನತೆಯ ದಿಕ್ಕು ತಪ್ಪಿಸುವ ಈ ರೀತಿಯ ಕೃತ್ಯಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡುಬಂದಲ್ಲಿ ಅಂತಹವರ ಕುರಿತಾಗಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಗೆಳೆಯರೊಂದಿಗೆ ಬೇಟೆಗೆ ತೆರಳಿದ್ದ ಯುವಕ ಶವವಾಗಿ ಪತ್ತೆ

ಮಡಿಕೇರಿ: ಸ್ನೇಹಿತರೊಂದಿಗೆ ಬೇಟೆಗೆ ಹೋದ ಯುವಕ ಶವವಾಗಿ ನದಿಯಲ್ಲಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಿರುಪಾಕ್ಷಪುರ ಗ್ರಾಮದಲ್ಲಿ ನಡೆದಿದೆ.

ವಿರುಪಾಕ್ಷಪುರ ಗ್ರಾಮದ ವಿನೋದ್ ಮೃತ ದುರ್ದೈವಿ. ಕಳೆದ ಕೆಲ ದಿನಗಳ ಹಿಂದೆ ಮೃತ ವಿನೋದ್​ ನಿಗೂಡವಾಗಿ ನಾಪತ್ತೆಯಾಗಿದ್ದ. ಸದ್ಯ ಆತನ ಮೃತದೇಹ ಕಾವೇರಿಯಲ್ಲಿ ನದಿಯಲ್ಲಿ ಪತ್ತೆಯಾಗಿದ್ದು, ಸಾವಿನ ಹಿಂದಿನ ಕೃತ್ಯ ಬೆಳಕಿಗೆ ಬಂದಿದೆ.


ಮೃತ ವಿನೋದ್ ಆತನ ನಾಲ್ವರು ಆಪ್ತ ಸ್ನೇಹಿತರು, ಒಟ್ಟೊಟ್ಟಿಗೆ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದವರು. ಅದೇ ಆತ್ಮೀಯತೆಯಿಂದಲೇ ಮೊನ್ನೆ ಗನ್ ಹಿಡಿದು ಬೇಟೆಗೆ ಹೊರಟಿದ್ದರು. ಬೇಟೆಗೆ ಹೋದ ನಾಲ್ವರಲ್ಲಿ ಮೂವರು ಹಿಂದಿರುಗಿ ಊರಿಗೆ ಬಂದಿದ್ದರೆ, ಓರ್ವ ಮಿಸ್ ಆಗಿದ್ದ. ಮಿಸ್ ಆದಾತ ನಾಲ್ಕು ದಿನವಾದರೂ ಪತ್ತೆಯೇ ಆಗಿರಲಿಲ್ಲ. ಕೊನೆಗೆ ಆತ ನದಿ ತಟದಲ್ಲಿ ಶವವಾಗಿ ಪತ್ತೆಯಾಗಿದ್ದ.

ಸೋಮವಾರ ವಿನೋದ್ ತನ್ನ ಸ್ನೇಹಿತರಾದ ಧರ್ಮ, ಯೋಗೀಶ್ ಮತ್ತು ಈಶ್ವರ್ ಜೊತೆ ಮಧ್ಯಾಹ್ನದ ಹೊತ್ತಿನಲ್ಲೇ ಎರಡು ಗನ್ನುಗಳನ್ನು ಹೆಗಲೇರಿಸಿಕೊಂಡು ಕಾವೇರಿ ನದಿಯನ್ನು ದಾಟಿ ಆಚೆ ಭಾಗದಲ್ಲಿದ್ದ ಅರಣ್ಯದಲ್ಲಿ ಬೇಟೆಯಾಡುವುದಕ್ಕೆ ಹೋಗಿದ್ದ. ಆದರೆ, ಮರಳಿ ಬಂದಿದ್ದು ಒಂಟಿ ಹೆಣವಾಗಿ. ಇನ್ನು ಕೊಲೆಯಾದಾತನ ಬಗ್ಗೆ ಸ್ನೇಹಿತರು ಯಾವುದೇ ಸುಳಿವುಗಳನ್ನು ನೀಡಿಲ್ಲ. 


ಬೇಟೆ ವೇಳೆ ಮಿಸ್​ ಫೈರ್ ಆಗಿ ವಿನೋದ್​ಗೆ ಗುಂಡು ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಮೃತನ ದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಬರೋ ವೇಳೆ ಆತನ ದೇಹ ನದಿಯಲ್ಲಿ ಕೊಚ್ಚಿಕೊಂಡು ಹೋಗಿತ್ತಂತೆ. ಇದರಿಂದ ಆತಂಕಗೊಂಡ ಸ್ನೇಹಿತರು ಊರಿಗೆ ಮರಳಿ ತಮಗೇನು ಗೊತ್ತಿಲ್ಲ ಎಂಬಂತೆ ನಟಿಸಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಕಾವೇರಿ ನದಿ ದಂಡೆಯಲ್ಲಿ ವಿನೋದನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.