ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಫಿ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಅದನ್ನು ಸೆರೆ ಹಿಡಿದ ಘಟನೆ ಮೂಡಿಗೆರೆ ತಾಲೂಕಿನ ದೇವೃಂದ ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆಯ ದೇವೃಂದ ರಮೇಶ್ ಅವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಅರಣ್ಯ ಇಲಾಖೆಯ ತಂಡವು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಮೂಡಿಗೆರೆ ಭಾಗದ ಅನೇಕ ಕಡೆಗಳಲ್ಲಿ ಚಿರತೆಯು ದಾಳಿ ನಡೆಸಿ ಅನೇಕ ಹಸುಗಳನ್ನು ಬಲಿ ತೆಗೆದುಕೊಂಡಿತ್ತು. ಸದಾ ಆತಂಕದಿಂದ ಕೂಡಿರುತ್ತಿದ್ದ ಗ್ರಾಮಸ್ಥರು ಚಿರತೆ ಬಲೆಗೆ ಬಿದ್ದಿರುವುದರಿಂದ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.
- ತನು ಕೊಟ್ಟಿಗೆಹಾರ, ವರದಿಗಾರರು
ಚಿಕ್ಕಮಗಳೂರು: ಪತ್ನಿಯನ್ನು ಹತ್ಯೆಗೈದು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯ ಶಿಕ್ಷೆಯನ್ನು ರದ್ದುಗೊಳಿಸಿದ ಹೈಕೋರ್ಟ್
ಚಿಕ್ಕಮಗಳೂರು: ಹಬ್ಬದ ದಿನ ಅಡುಗೆ ಮಾಡಿಲ್ಲ ಎಂದು ಆಕ್ರೋಶಗೊಂಡು ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಮಾರ್ಪಾಡು ಮಾಡಿ ಆದೇಶಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸುರೇಶ ಎಂಬುವರು ಪತ್ನಿ ರಾಧಾಳನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದರು. ಶಿಕ್ಷೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವ ಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ಅಪರಾಧಿಯ ವಿರುದ್ಧ ಬೇರೆ ಯಾವುದೇ ಪ್ರಕರಣಗಳು ಇಲ್ಲದಿದ್ದರೆ ತಕ್ಷಣ ಜೈಲಿನಿಂದ ಬಿಡುಗಡೆಗೊಳಿಸಿ ಎಂದು ಆದೇಶಿಸಿದೆ.
ಅಪರಾಧಿ ಈಗಾಗಲೇ ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿರುವ ಕಾರಣ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿ ಎಂದು ಆದೇಶಿಸಿದೆ.
ಬಿಡುಗಡೆಗೆ ಕಾರಣಗಳೇನು ?
ಮೃತ ಮಹಿಳೆ ಮದ್ಯ ವ್ಯಸನಿಯಾಗಿದ್ದಳು ಎಂಬುದನ್ನು ಸಾಕ್ಷ್ಯಗಳು ದೃಢಪಡಿಸುತ್ತಿವೆ. ಇಬ್ಬರು ಮಕ್ಕಳ ತಾಯಿಯಾಗಿದ್ದ ಆಕೆ ಮನೆ ಕೆಲಸ ಮಾಡುತ್ತಿರಲಿಲ್ಲ. ಗೌರಿಗಣೇಶ ಹಬ್ಬದ ದಿನ ಅಡುಗೆ ಮಾಡಿಲ್ಲ, ಮಕ್ಕಳಿಗೆ ಊಟ ಕೊಟ್ಟಿಲ್ಲ. ಪಾನಮತ್ತಳಾಗಿ ಮಲಗಿದ್ದಾಳೆ ಎಂದು ಕೋಪಗೊಂಡ ಪತಿ ದಿಢೀರ್ ಆವೇಶದಲ್ಲಿ ಆಕೆಗೆ ದೊಣ್ಣೆಯಿಂದ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಪತಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂಬುದು ಕಂಡುಬಂದಿದೆ. ಹಾಗಾಗಿ, ಇದು ಉದ್ದೇಶಪೂರ್ವಕವಲ್ಲದ ನರಹತ್ಯೆ ಎಂದೇ ಪರಿಗಣಿಸಬೇಕಾಗುತ್ತದೆ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 2016ರಲ್ಲಿ ಸುರೇಶ ಪತ್ನಿಯನ್ನು ದೊಣ್ಣೆಯಿಂದ ಹೊಡೆದಿದ್ದರು. ವಿಚಾರಣಾ ನ್ಯಾಯಾಲಯ 2017ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.









0 Comments