ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಫೋನ್ ಮೂಲಕ ಸಮಸ್ಯೆಯನ್ನು ಬಗೆಹರಿಸುವುದಾಗಿ ಲಕ್ಷಾಂತರ ರೂಪಾಯಿ ಹಣವನ್ನು ವಂಚನೆ ಮಾಡಿದ್ದ ನಯವಂಚಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಕೌಟುಂಬಿಕ ಕಲಹ, ಸಮಸ್ಯೆಗಳು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್ ಮೂಲಕ ಪರಿಹರಿಸುವುದಾಗಿ ಫೇಸ್ ಬುಕ್ ನ Pandit Modi Bettappa Astrology ಪೇಜ್ ನಲ್ಲಿ ಹಾಕಿಕೊಂಡಿದ್ದ ಜಾಹಿರಾತನ್ನು ನೋಡಿ ಕೌಟುಂಬಿಕ ಸಮಸ್ಯೆ ಹೊಂದಿದ್ದ ಮಹಿಳೆಯೋರ್ವರು ಜಾಹಿರಾತಿನಲ್ಲಿದ್ದ ಫೋನ್ ನಂಬರ್ ಗೆ ಕರೆ ಮಾಡಿ ಸಮಸ್ಯೆ ಸರಿ ಮಾಡಿಕೊಡಿ ಎಂದು ತಮ್ಮ ಸಮಸ್ಯೆಯನ್ನು ಕೇಳಿಕೊಂಡಾಗ, ನಿಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತೇನೆ 7000 ರೂಪಾಯಿ ಹಣ ಖರ್ಚಾಗುತ್ತದೆ ಎಂದು ಹೇಳಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು, ಪುನಃ ಬೇರೆ ಬೇರೆ ಪೂಜೆ ಮಾಡಬೇಕು ಆಗ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹಂತ ಹಂತವಾಗಿ ಒಟ್ಟು 1,16,001 ರೂಪಾಯಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ಇನ್ನು ಹಲವು ಸಮಸ್ಯೆ ಗಳಿವೆ ಎಂದು ಹೇಳಿ ಪೂಜೆ ಖರ್ಚಿಗೆ ಹಣ ಕಳುಹಿಸಿ ಎಂದು ಹೇಳಿದ್ದಾನೆ.
ಇದನ್ನೂ ಓದಿ: ತೋಟಕ್ಕೆ ಎಲೆಚುಕ್ಕಿ ರೋಗ ಬಾಧಿಸಿದ ಹಿನ್ನೆಲೆ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೃಷಿಕ
ಈ ವೇಳೆ ಮಹಿಳೆ ಅನುಮಾನಗೊಂಡು ಚಿಕ್ಕಮಗಳೂರು ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದ ಆರೋಪಿ ಗಣೇಶ್ ಗೊಂದಳೆ ಎಂಬ 27 ವರ್ಷ ಪ್ರಾಯದ ಜ್ಯೋತಿಷ್ಯ ಶಾಸ್ತ್ರ ಕೆಲಸ ಮಾಡುವ ಬೆಂಗಳೂರಿನ ಸಹಕಾರ ನಗರದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ 87,500 ರೂಪಾಯಿ ನಗದು ಒಂದು ಮೊಬೈಲ್ ಫೋನ್ ಮತ್ತು ಎರಡು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಈ ಸಂಬಂಧ ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವ ಸಲುವಾಗಿ ಪೊಲೀಸ್ ಇಲಾಖೆ ರಚಿಸಿದ್ದ ತಂಡದಲ್ಲಿ ಪಿ.ಐ. ಮುತ್ತರಾಜ್, ಪಿ.ಎಸ್.ಐ. ನಾಸೀರ್ ಹುಸೇನ್ ಮತ್ತು ರಘುನಾಥ್ ಎಸ್. ವಿ. ಎ.ಎಸ್.ಐ. ಎಂ. ಸಿ. ಪ್ರಕಾಶ್ ಮತ್ತು ಸಿಬ್ಬಂದಿಗಳಾದ ವಿನಾಯಕ ಮತ್ತು ಅನ್ವರ್ ಪಾಷಾ ರವರು ಕಾರ್ಯನಿರ್ವಹಿಸಿರುತ್ತಾರೆ.
ಸಾರ್ವಜನಿಕರು ಇಂತಹ ವಂಚನೆಗಳ ಜಾಲಕ್ಕೆ ಬೀಳದೆ, ಈ ರೀತಿಯ ಕೃತ್ಯಗಳನ್ನು ನಡೆಸಿ ವಂಚನೆ ಮಾಡುತ್ತಿರುವ ಕುರಿತು ಗಮನಕ್ಕೆ ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ಹಂಚಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.






0 Comments