ಹಾಸನ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ನಿರಂತರವಾಗಿ ಆನೆ ದಾಳಿಯು ನಡೆಯುತ್ತಲೇ ಇದ್ದು, ಇಂದು ಬೆಳಗ್ಗೆ ಕೂಡ ಆನೆಗಳು ದಾಂಧಲೆ ನಡೆಸಿದೆ.
ಇಂದು ಬೆಳಗ್ಗೆ 7.15 ರ ಸುಮಾರಿಗೆ ಸಕಲೇಶಪುರದ ಬಾಗೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆಬಾಗೆಯ ಬಸವೇಶ್ವರ ದೇವಸ್ಥಾನದ ಆವರಣದೊಳಗೆ ಆನೆಗಳು ನುಗ್ಗಿ ದೇವಸ್ಥಾನದ ಆವರಣದ ಬೇಲಿಯನ್ನು ಮುರಿದು ಹಾಕಿವೆ.
ಇದನ್ನೂ ಓದಿ: ವಿವಾಹಿತ ಮಹಿಳೆಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಕಿಡ್ನ್ಯಾಪ್ ಮಾಡಿ ಹತ್ಯೆಗೈದ ದುರುಳರು
ಈ ವೇಳೆ ದೇವರ ಪೂಜೆಯಲ್ಲಿ ಮಗ್ನರಾಗಿದ್ದ ಸ್ಥಳೀಯರಾದ ಗಂಗಾಧರ್ ಪೂಜಾ ಕಾರ್ಯ ನೆರವೇರಿಸುತ್ತಿದ್ದರು. ತಕ್ಷಣವೇ ಸ್ಥಳೀಯರು ಆನೆಗಳನ್ನು ಅಲ್ಲಿಂದ ಓಡಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ.
ಸ್ಥಳೀಯರ ಕಿರುಚಾಟಕ್ಕೆ ಆನೆಗಳೂ ಕೆರಳಿದ್ದು ಕೆಲ ಸ್ಥಳೀಯರನ್ನು ಬೆನ್ನಟ್ಟಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಬ್ಬರು ಫಾರೆಸ್ಟ್ ಗಾರ್ಡ್ ಹಾಗೂ ಸ್ಥಳೀಯರಾದ ಜಗನ್ನಾಥ ಪೂಜಾರಿಯವರನ್ನು ಆನೆ ಬೆನ್ನಟ್ಟಿದೆ. ಅವರು ಅಲ್ಲಿಂದ ಓಡಿ ಮನೆಯೊಳಗೇ ಹೊಕ್ಕು ಬಾಗಿಲು ಹಾಕಿಕೊಂಡರು.
ಮನೆಯವರೆಗೆ ಬಂದ ಆನೆ ಮನೆಯ ಹೊರಗೆ ಆಕ್ರೋಶದಿಂದ ಸುತ್ತಾಡಿ ಪುನಃ ಬಸವೇಶ್ವರ ದೇವಸ್ಥಾನದ ಬಳಿಗೆ ಸಾಗಿದ್ದು ಈ ಭಾಗದ ಜನರನ್ನು ಆತಂಕಕ್ಕೆ ದೂಡಿದೆ. ಒಂದೆಡೆ ಮಾರಕವಾದ ಎಲೆಚುಕ್ಕಿ ರೋಗವು ತೋಟವನ್ನು ಬಾಧಿಸುತ್ತಿದ್ದರೆ, ಇತ್ತ ಆನೆಗಳ ಉಪಟಳದಿಂದ ಕೃಷಿಕರು ಬೇಸತ್ತಿದ್ದು ಬೆಳೆನಾಶ ಹೊಂದುವ ಭೀತಿಯಲ್ಲಿದ್ದಾರೆ. ಈ ಭಾಗದ ಅನೇಕ ಕೃಷಿ ಕಾರ್ಮಿಕರನ್ನು ಸಹ ಆನೆ ದಾಳಿ ಮಾಡಿ ಬಲಿ ಪಡೆದುಕೊಂಡಿದ್ದು, ಎಗ್ಗಿಲ್ಲದೇ ಆನೆ ದಾಳಿಯು ಮುಂದುವರೆದಿದೆ.








0 Comments