ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯ ರಾಜಕಾರಣದಲ್ಲಿ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಇತಿಹಾಸವನ್ನು ನಿರ್ಮಿಸಿ ಅನೇಕರ ರಾಜಕೀಯ ಜೀವನಕ್ಕೆ ಸಾಕ್ಷಿಯಾದ ಚಿಕ್ಕಮಗಳೂರು ಜಿಲ್ಲೆಯನ್ನು ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮತ್ತೊಮ್ಮೆ ನೆನಪಿಸಿಕೊಂಡಿದೆ. 

ಕಾಫಿನಾಡು ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಹಾಗೂ ಬಳ್ಳಾರಿಯಿಂದ ಸೋನಿಯಾಗಾಂಧಿ ಸಂಸದರಾಗಿ ಆಯ್ಕೆಯಾಗಿದ್ದ ವಿಚಾರವನ್ನು ಇಂದಿನ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ ಪ್ರಸ್ತಾಪಿಸಿದೆ.

ಇದನ್ನೂ ಓದಿ: ಹತ್ತಾರು ಕನಸು ಹೊತ್ತಿದ್ದ ಕಾಫಿನಾಡ ಕಬ್ಬಡಿ ಕ್ರೀಡಾಪಟು ಪ್ರತಾಪ್ ಕ್ಯಾನ್ಸರ್ ಗೆ ಬಲಿ!


ಇಂದಿರಾ ಗಾಂಧಿಯವರ ರಾಜಕೀಯ ಜೀವನದಲ್ಲಿ ಮಹತ್ತರ ಶಕ್ತಿ ತುಂಬಿದ್ದು ಕರ್ನಾಟಕದ ಚಿಕ್ಕಮಗಳೂರು. ಸೋನಿಯಾ ಗಾಂಧಿಯವರನ್ನು ಲೋಕಸಭೆಗೆ ಆಯ್ಕೆ ಮಾಡಿದ್ದು ಬಳ್ಳಾರಿ ಎಂದು ತಿಳಿಸಿದೆ.

ಇತಿಹಾಸದಲ್ಲಿ ಕಾಂಗ್ರೆಸ್ ಪುಟಿದೆದ್ದಿದ್ದು ಕರ್ನಾಟಕದ ನೆಲದಿಂದಲೇ, ಈಗಲೂ ಮತ್ತೊಮ್ಮೆ ಇತಿಹಾಸ ಮರುಕಳಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದೆ. 

ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಇಂದು ಹೆಜ್ಜೆ ಹಾಕಿದರು, ಭವ್ಯ ಭಾರತದೆಡೆಗೆ ಅವರಿಗಿರುವ ಪ್ರೀತಿ, ಅಭಿಮಾನ, ಬದ್ಧತೆಗಳಿಗೆ ವಯಸ್ಸು, ಆಯಾಸ, ಅನಾರೋಗ್ಯ ಯಾವುದೂ ಅಡ್ಡಿಯಾಗುವುದಿಲ್ಲ. ಅನಾರೋಗ್ಯದಲ್ಲೂ ಅವರ ಈ ಉತ್ಸಾಹವು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಹಂಚಿಕೊಂಡಿದೆ. 


ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದು ಪುತ್ರನ ರಾಹುಲ್ ಗಾಂಧಿ ಜೊತೆಗೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಕಾರ್ಯಕರ್ತರಲ್ಲಿ ಮುಖಂಡರಲ್ಲಿ ಇನ್ನಷ್ಟು ಹೆಚ್ಚಿನ ಹುರುಪನ್ನು ನೀಡಿದೆ. ಈ ಮಧ್ಯೆ ಚಿಕ್ಕಮಗಳೂರನ್ನು ನೆನಪಿಸಿಕೊಂಡಿರುವುದು ಎಲ್ಲೆಡೆ ಚರ್ಚೆಯಲ್ಲಿದೆ.