ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಸ್ನೇಹಿತರೊಂದಿಗೆ ಬೇಟೆಗೆ ಹೋದ ಯುವಕ ಶವವಾಗಿ ನದಿಯಲ್ಲಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಿರುಪಾಕ್ಷಪುರ ಗ್ರಾಮದಲ್ಲಿ ನಡೆದಿದೆ.
ವಿರುಪಾಕ್ಷಪುರ ಗ್ರಾಮದ ವಿನೋದ್ ಮೃತ ದುರ್ದೈವಿ. ಕಳೆದ ಕೆಲ ದಿನಗಳ ಹಿಂದೆ ಮೃತ ವಿನೋದ್ ನಿಗೂಡವಾಗಿ ನಾಪತ್ತೆಯಾಗಿದ್ದ. ಸದ್ಯ ಆತನ ಮೃತದೇಹ ಕಾವೇರಿಯಲ್ಲಿ ನದಿಯಲ್ಲಿ ಪತ್ತೆಯಾಗಿದ್ದು, ಸಾವಿನ ಹಿಂದಿನ ಕೃತ್ಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಾಫಿನಾಡಿನಲ್ಲೂ ಪಶುಗಳಿಗೆ ಆರಂಭವಾದ ಚರ್ಮಗಂಟು ರೋಗ | ರೋಗದ ಲಕ್ಷಣಗಳೇನು ? ನಿಯಂತ್ರಣಾ ಕ್ರಮಗಳೇನು ? ಇಲ್ಲಿದೆ ಡೀಟೇಲ್ಸ್
ಮೃತ ವಿನೋದ್ ಆತನ ನಾಲ್ವರು ಆಪ್ತ ಸ್ನೇಹಿತರು, ಒಟ್ಟೊಟ್ಟಿಗೆ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದವರು. ಅದೇ ಆತ್ಮೀಯತೆಯಿಂದಲೇ ಮೊನ್ನೆ ಗನ್ ಹಿಡಿದು ಬೇಟೆಗೆ ಹೊರಟಿದ್ದರು. ಬೇಟೆಗೆ ಹೋದ ನಾಲ್ವರಲ್ಲಿ ಮೂವರು ಹಿಂದಿರುಗಿ ಊರಿಗೆ ಬಂದಿದ್ದರೆ, ಓರ್ವ ಮಿಸ್ ಆಗಿದ್ದ. ಮಿಸ್ ಆದಾತ ನಾಲ್ಕು ದಿನವಾದರೂ ಪತ್ತೆಯೇ ಆಗಿರಲಿಲ್ಲ. ಕೊನೆಗೆ ಆತ ನದಿ ತಟದಲ್ಲಿ ಶವವಾಗಿ ಪತ್ತೆಯಾಗಿದ್ದ.
ಸೋಮವಾರ ವಿನೋದ್ ತನ್ನ ಸ್ನೇಹಿತರಾದ ಧರ್ಮ, ಯೋಗೀಶ್ ಮತ್ತು ಈಶ್ವರ್ ಜೊತೆ ಮಧ್ಯಾಹ್ನದ ಹೊತ್ತಿನಲ್ಲೇ ಎರಡು ಗನ್ನುಗಳನ್ನು ಹೆಗಲೇರಿಸಿಕೊಂಡು ಕಾವೇರಿ ನದಿಯನ್ನು ದಾಟಿ ಆಚೆ ಭಾಗದಲ್ಲಿದ್ದ ಅರಣ್ಯದಲ್ಲಿ ಬೇಟೆಯಾಡುವುದಕ್ಕೆ ಹೋಗಿದ್ದ. ಆದರೆ, ಮರಳಿ ಬಂದಿದ್ದು ಒಂಟಿ ಹೆಣವಾಗಿ. ಇನ್ನು ಕೊಲೆಯಾದಾತನ ಬಗ್ಗೆ ಸ್ನೇಹಿತರು ಯಾವುದೇ ಸುಳಿವುಗಳನ್ನು ನೀಡಿಲ್ಲ.
ಬೇಟೆ ವೇಳೆ ಮಿಸ್ ಫೈರ್ ಆಗಿ ವಿನೋದ್ಗೆ ಗುಂಡು ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಮೃತನ ದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಬರೋ ವೇಳೆ ಆತನ ದೇಹ ನದಿಯಲ್ಲಿ ಕೊಚ್ಚಿಕೊಂಡು ಹೋಗಿತ್ತಂತೆ. ಇದರಿಂದ ಆತಂಕಗೊಂಡ ಸ್ನೇಹಿತರು ಊರಿಗೆ ಮರಳಿ ತಮಗೇನು ಗೊತ್ತಿಲ್ಲ ಎಂಬಂತೆ ನಟಿಸಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಕಾವೇರಿ ನದಿ ದಂಡೆಯಲ್ಲಿ ವಿನೋದನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.








0 Comments