ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗಿರಿ ಶ್ರೇಣಿಗಳ ತಪ್ಪಲಿನಲ್ಲಿರುವ ವಿವಾದಿತ ಧಾರ್ಮಿಕ ಕ್ಷೇತ್ರ ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದಲ್ಲಿ ನಾಳೆ ಹಿಂದೂ ಬ್ರಿಗೇಡ್ ರಾಜ್ಯ ಸಂಘಟನೆ ಉದ್ಘಾಟನೆ ನಡೆಯಲಿದೆ ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಹಿಂದೂ ಬ್ರಿಗೇಡ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಖಾಂಡ್ಯ ಇತ್ತೀಚಿನ ದಿನಗಳಲ್ಲಿ ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡುವ ರೀತಿಯ ವ್ಯತಿರಿಕ್ತ ಘಟನೆಗಳು ವಾತಾವರಣಗಳಿದ್ದು ಅವರ ರಾಜಕಾರಣಕ್ಕೆ ಕುತಂತ್ರ, ಷಡ್ಯಂತ್ರಗಳು ನಡೆಯುತಲಿದ್ದು ಇದನ್ನು ಮಟ್ಟಹಾಕುವ ನಿಟ್ಟಿನಲ್ಲಿ, ಹಿಂದೂಗಳ ಸಂಘಟನೆ ಹಿತದೃಷ್ಟಿಯ ಉದ್ದೇಶದಿಂದಾಗಿ ಹಿಂದೂ ಬ್ರಿಗೇಡ್ ಕಾರ್ಯನಿರ್ವಹಿಸಲಿದೆ ಎಂದರು.

ಇದನ್ನೂ ಓದಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಸೇತುವೆ, ಕಾಲುಸಂಕ ಅಭಿವೃದ್ಧಿಗೆ ಅರಣ್ಯ ಇಲಾಖೆ ಕಾನೂನು ಅಡ್ಡಿಯಾಗಿದೆ: ಶಾಸಕ ಟಿ.ಡಿ ರಾಜೇಗೌಡ

ನಾಳೆ ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದಲ್ಲಿ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ರೀತಿಯಲ್ಲಿ ಹಿಂದೂ ಬ್ರಿಗೇಡ್ ಉದ್ಘಾಟನೆ ನಡೆಯಲಿದ್ದು, ರಾಜ್ಯದ 300 ಜನ ಕಾರ್ಯಕರ್ತರು ಭಾಗಿಯಾಗುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.


ನಾಳಿನ ಈ ಕಾರ್ಯಕ್ರಮದಲ್ಲಿ ಹಿಂದೂ ಬ್ರಿಗೇಡ್ ರಾಜ್ಯಾಧ್ಯಕ್ಷರಾದ ರವಿಕುಮಾರ ಜಯನಗರ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರಾವ್, ಉಪಾಧ್ಯಕ್ಷ ಸಂತೋಷ್ ಕಲ್ಬುರ್ಗಿ, ಪ್ರಶಾಂತ್ ಬೆಳಗಾವಿ, ಸಂತೋಷ್ ಶಿವಮೊಗ್ಗ, ಮುರುಳಿ ಬೆಂಗಳೂರು, ರವಿ ಚಾಮರಾಜನಗರ, ಮೋಹನ್ ಕೂರ್ಗ್, ವಸಂತ ಹೊಸದುರ್ಗ, ಚಂದ್ರಶೇಖರ್ ಗೌರಿಗಂಡಿ, ರಘು ಗೌಡ್ರು, ಮೆಸ್ಸ ಪ್ರದೀಪ್ ಚಿಕ್ಕಮಗಳೂರು ಹಾಜರಿರಲಿದ್ದಾರೆ, ಅಂತೆಯೇ ಚಿಕ್ಕಮಗಳೂರು ಜಿಲ್ಲೆಯ ಅಧ್ಯಕ್ಷರಾಗಿ ಚಂದ್ರಶೇಖರ್ ಗೌರಿಗಂಡಿ ಆಯ್ಕೆಯಾಗಿದ್ದಾರೆ. 

ದತ್ತಾತ್ರೇಯ ಪೀಠದಲ್ಲಿ ಮಾಂಸಾಹಾರ ತಯಾರಿ, ಸೇವನೆ ಕುರಿತು ಬ್ರಿಗೇಡ್ ವಿರೋಧ :

ಹಿಂದೂಗಳು ಧಾರ್ಮಿಕ ಭಾವನೆಯನ್ನು ಹೊಂದಿರುವ ಗುರುದತ್ತಾತ್ರೇಯ ಪೀಠದಲ್ಲಿ ಕಳೆದ ಆರು ತಿಂಗಳ ಹಿಂದೆಯೂ ಮಾಂಸ ಭಕ್ಷಣೆ ನಡೆದಿತ್ತು. ಬೇರೆ ಕಡೆಗಳಿಂದ ಬಂದಿದ್ದ ಮುಸಲ್ಮಾನರು ಬಿರಿಯಾನಿಯನ್ನು ತಾತ್ಕಾಲಿಕ ಶೆಡ್ ನಲ್ಲಿ ತಯಾರಿಸಿ ಸೇವನೆ ಮಾಡುತ್ತಿರುವ ವೀಡಿಯೋಗಳು ವೈರಲ್ ಆಗಿದ್ದವು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಅವೆಲ್ಲವನ್ನೂ ತೆರವುಗೊಳಿಸಿ ಯಾವುದೇ ಗೊಂದಲಗಳು ಉಂಟಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಿದ್ದರು. 

ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿರುವ ಶೆಡ್ ನಲ್ಲಿ ಪ್ರತೀ ವರ್ಷವೂ ದತ್ತಜಯಂತಿಯ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮ ಸೇನೆಯ ಕಾರ್ಯಕರ್ತರು ದತ್ತಮಾಲೆಯನ್ನು ಧರಿಸಿ ಹೋಮಹವನಗಳನ್ನು ನಡೆಸುತ್ತಾರೆ. ಮಾಂಸಾಹಾರವನ್ನು ದತ್ತಪೀಠದ ಆವರಣದಲ್ಲಿ ಮಾಡುವುದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಲಿದೆ ಎಂದು ಕಿಡಿಕಾರಿರುವ ಪದಾಧಿಕಾರಿಗಳು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳದೇ ಹೋದಲ್ಲಿ ನಾವೇ ಕ್ರಮಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರಸ್ತುತ ಇಲಾಖೆ ಮಧ್ಯ ಪ್ರವೇಶಿಸಿ ಎಲ್ಲವನ್ನೂ ತೆರವುಗೊಳಿಸಿದ್ದು, ಸ್ಥಳವನ್ನು ಸ್ವಚ್ಚಗೊಳಿಸಿದೆ. ಯಾರೂ ಸಹ ಶೆಡ್ ನ್ನು ಪ್ರವೇಶಿಸದಂತೆ ಸುತ್ತಲೂ ಅಡ್ಡಲಾಗಿ ಕಟ್ಟಿಗೆಗಳಿಂದ ಒಳ ಪ್ರವೇಶಿಸದಂತೆ ಮಾರ್ಪಾಡು ಮಾಡಲಾಗಿದ್ದು, ಹಿಂದೂ ಸಂಘಟನೆಗಳು ಘಟನಾ ಸಂಬಂಧ ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಿದೆ.