ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರಪಿತ ಬಾಪೂಜಿ ಅವರ ನೆನಪಿಗಾಗಿ, ಅವರ ಆದರ್ಶಯುತ ಜೀವನದ ಸಾರ್ಥಕತೆಯನ್ನು ಸಾರುವ ಸಲುವಾಗಿ ಗಾಂಧಿಜೀಯನ್ನು ನಿತ್ಯವೂ ದೇವರಂತೆ ಪೂಜೆ ಮಾಡಲೆಂದು ಗುಡಿ ಕಟ್ಟಿ ಪೂಜೆ ಸಲ್ಲಿಸುತ್ತಿರುವ ಕುರಿತು ವರದಿಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೆನಪಿಗಾಗಿ ದೇವಾಲಯ ಕಟ್ಟಲಾಗಿದೆ. ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ, ಗಾಂಧಿ ಜಯಂತಿ ಸೇರಿದಂತೆ ರಾಷ್ಟ್ರೀಯ ಹಬ್ಬದಂದು ಈ ಐತಿಹಾಸಿಕ ಗುಡಿಯ ಪುಟ್ಟ ಗಾಂಧಿಜೀಯನ್ನು ದೇವರಂತೆ ಪೂಜಿಸುತ್ತಾರೆ ಜನರು.


ದೇಶದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ದೇವಾಲಯಗಳಿರೋದೆ ತುಂಬಾ ವಿರಳ. ಇಂತಹುದರಲ್ಲಿ ಬಾಪೂಜಿ ಸ್ಮರಣಾರ್ಥ ಕಟ್ಟಿರುವ ಈ ಗುಡಿ ಇರುವುದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಚಿಕ್ಕಮಗಳೂರು ಹಾಗೂ ನಿಡಘಟ್ಟ ಗ್ರಾಮಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದ್ದು, ಗಾಂಧೀಜಿ ಈ ಗ್ರಾಮದಲ್ಲಿ ಕೂತು ಭಾಷಣ ಮಾಡಿದ ಜಾಗದಲ್ಲಿ ಗಾಂಧಿ ಗುಡಿ ನಿರ್ಮಾಣ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಟ್ಟಿದ್ದ ಹೋರಾಟದ ಕರೆಗೆ ನಿಡಘಟ್ಟ ಗ್ರಾಮದ 20ಕ್ಕೂ ಹೆಚ್ಚು ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರಂತೆ.

ಹೋರಾಟದ ಹಾದಿಯಲ್ಲಿ ಸೆರೆವಾಸವನ್ನು ಸಹ ಕಂಡಿದ್ದ ಈ ಗ್ರಾಮದ ಅಂದಿನ ಯುವಕರು, ಗಾಂಧೀಜಿಯ ಅವಿರತ ಪ್ರಯತ್ನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಈ ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯ ಆಚರಣೆ ನಡೆಸಿದ್ದರು.


1948 ಜನವರಿ 30 ರಂದು ಗೂಡ್ಸೆಯ ಗುಂಡಿಗೆ ಗಾಂಧಿ ಬಲಿಯಾದಾಗ ಈ ಗ್ರಾಮದ ಹೋರಾಟಗಾರರು ಕಂಗಾಲಾಗಿದ್ರು. ಗಾಂಧಿ ನಿಧನರಾದ 21ನೇ ದಿನಕ್ಕೆ ಆ ದಿವ್ಯಚೇತನದ ಸ್ಮರಣಾರ್ಥವೇ ಈ ಗುಡಿ ನಿರ್ಮಾಣವಾಯಿತು. 

ರಾಷ್ಟ್ರೀಯ ಹಬ್ಬಗಳಂದು ಪೂಜೆ: 

ದೇಶದ ಎಲ್ಲಾ ರಾಷ್ಟ್ರಿಯ ಹಬ್ಬಗಳಂದು ಗುಡಿಯಲ್ಲಿರುವ ಗಾಂಧೀಜಿಯ ಮೂರ್ತಿಯನ್ನು ಗ್ರಾಮಸ್ಥರು, ಶಾಲಾ ಮಕ್ಕಳು ರಾಷ್ಟ್ರಭಕ್ತರು ದೇವರಂತೆ ಪೂಜಿಸುತ್ತಾರೆ. ತ್ಯಾಗ ಬಲಿದಾನದ ಸಂಕೇತವಾಗಿರುವ ಈ ಐತಿಹಾಸಿಕ ಗಾಂಧಿ ಗುಡಿ ಸಣ್ಣದಾದ ಕಟ್ಟಡದಿಂದ ಕೂಡಿದೆ. ಮೌಲ್ಯಗಳು ಕಳೆದು ಹೋಗುತ್ತಿರುವ ಈ ಕಾಲದಲ್ಲಿ ಹೊಸ ತಲೆಮಾರಿನ ಯುವಕರಿಗೆ ಗಾಂಧಿಯ ವಿಚಾರ ಧಾರೆಗಳನ್ನು ಗಾಂಧಿ ಗುಡಿ ಮೂಲಕ ತಿಳಿಸುತ್ತಿರೋದು ಹೆಮ್ಮೆಯ ವಿಷಯವಾಗಿದೆ.ಮಹಾತ್ಮಾ ಗಾಂಧೀಜಿಯ ನೆನಪಿನಲ್ಲಿ ದೇಶದಲ್ಲಿ ನಿರ್ಮಿಸಲಾಗಿರುವ ದೇವಾಲಯಗಳು ಬೆರಳೆಣಿಕೆಯಷ್ಟು. ಕರ್ನಾಟಕದಲ್ಲಿ ಮಂಗಳೂರು, ಮಂಡ್ಯ ಬಿಟ್ರೆ ಚಿಕ್ಕಮಗಳೂರಿನಲ್ಲಿ ಮಾತ್ರ ಗಾಂಧಿಗುಡಿ ಇರೋದು, ಹಾಗಾಗಿ ಇದು ಜಿಲ್ಲೆಯ ಜನರ ಪಾಲಿಗೆ ಹೆಮ್ಮೆಯ ವಿಚಾರ.

ಗಾಂಧಿ ಜಯಂತಿಯ ಅಂಗವಾಗಿ ರಾಷ್ಟ್ರಪಿತನ ಗುಡಿಯಲ್ಲಿ ಇಂದೂ ಸಹ ಪೂಜೆ ಹಾಗೂ ಪುಷ್ಪಾರ್ಚನೆ ನಡೆದಿದ್ದು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಈ ಪೂಜೆಯಲ್ಲಿ ಭಾಗಿಯಾಗಿದ್ದರು.