ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.
ಕೊಪ್ಪ ತಾಲೂಕಿನ ಶ್ರೀ ಕ್ಷೇತ್ರ ಶಕಟಪುರ ಸಂಸ್ಥಾನಕ್ಕೆ ಭಾರತ ಸರ್ಕಾರದ ಅಟಾರ್ನಿ ಜನರಲ್ ವೆಂಕಟ ರಮಣಿಯವರು ಭೇಟಿ ನೀಡಿ ಶ್ರೀಗಳ ಹಾಗೂ ದೇವರ ಕೃಪೆಗೆ ಪಾತ್ರರಾದರು.
ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್, ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠದ ಪ್ರಧಾನ ಶಿಷ್ಯರಾದ, ಭಾರತ ಸರ್ಕಾರದ ಅಟಾರ್ನಿ ಜನರಲ್ ಆದ ಶ್ರೀ ಆರ್ ವೆಂಕಟರಮಣಿ ರವರು ತಮ್ಮ ಕುಟುಂಬದ ಸಮೇತ ಭೇಟಿ ನೀಡಿ ದೇವರ ಹಾಗೂ ಶ್ರೀಗಳ ದರ್ಶನ ಪಡೆದು, ಅನುಗ್ರಹ ಪಡೆದರು.
ಪೂಜ್ಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅವರು ಶ್ರೀಗಳ ಚರಣಗಳಿಗೆ ಅನಂತಕೋಟಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ, ಗುರುಗಳ ಆಶೀರ್ವಾದ ಪಡೆದರು.
ಶೃಂಗೇರಿಯಿಂದ ಕಾಶ್ಮೀರದ ಶಾರದಾ ದೇಗುಲಕ್ಕೆ ನಾಳೆ ಶಾರದೆಯ ವಿಗ್ರಹ ಹಸ್ತಾಂತರ :
ಶೃಂಗೇರಿ: ಕಾಶ್ಮೀರದ ಗಡಿ ಭಾಗದ ತ್ರಿತ್ವಾಲ್ ನಲ್ಲಿ ಶಾರದಾದೇವಿ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೃಂಗೇರಿಯ ಶಾರದೆ ಸನ್ನಿಧಿಯಿಂದ ವಿಜಯದಶಮಿಯ ದಿನ ಅಂದರೆ ನಾಳೆ ಪಂಚಲೋಹ ಮೂರ್ತಿ ಹಸ್ತಾಂತರ ಕಾರ್ಯವು ನಡೆಯಲಿದೆ.
ಕಾಶ್ಮೀರದ ಸೇವ್ ಶಾರದಾ ಸಮಿತಿಯವರು ಶೃಂಗೇರಿಗೆ ಬಂದು ಪಂಚಲೋಹ ವಿಗ್ರಹ ಪಡೆಯಲಿದ್ದಾರೆ, ಈ ನಿಟ್ಟಿನಲ್ಲಿ ಸಿದ್ಧತೆಗಳು ಸಹ ನಡೆಯುತ್ತಿದೆ.
ನಾಳೆ ವಿಗ್ರಹಕ್ಕೆ ಜರುಗಲಿದೆ ವಿಶೇಷ ಪೂಜೆ:
ವಿಜಯದಶಮಿಯ ಶುಭ ದಿನವಾದ ನಾಳೆ ಪಂಚಲೋಹದಿಂದ ನಿರ್ಮಾಣ ಮಾಡಲಾಗಿರುವ ದೇವಿಯ ವಿಗ್ರಹವನ್ನು ಶೃಂಗೇರಿಯಲ್ಲಿ ವಿಶೇಷವಾಗಿ ಪೂಜಿಸಿ ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿಯು ದೊರಕಿದೆ. ಅಂತೆಯೇ ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಕೆತ್ತನೆ ಮಾಡಿರುವ ದೇವಿಯ ವಿಗ್ರಹದ ಹಸ್ತಾಂತರ ಕಾರ್ಯವು ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ ಸಮಿತಿಯ 12 ಮಂದಿ ಶೃಂಗೇರಿಗೆ ಹೋಗಿ ಪಂಚಲೋಹ ಮೂರ್ತಿ ಪಡೆಯುತ್ತೇವೆ. ಕಾಶ್ಮೀರದಲ್ಲಿ ದೇಗುಲ ನಿರ್ಮಾಣ ಕಾರ್ಯ ಪೂರ್ಣ ಮುಗಿದಿಲ್ಲ. ಹೀಗಾಗಿ, ಸದ್ಯಕ್ಕೆ ಮೂರ್ತಿಯನ್ನು ಶೃಂಗೇರಿ ಅಥವಾ ಬೆಂಗಳೂರಿನಲ್ಲಿ ಇಡುತ್ತೇವೆ ಎಂದು ತಿಳಿಸಿದರು.
ದೇಗುಲ ನಿರ್ಮಾಣಕ್ಕೆ ₹ 1.5 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈವರೆಗೆ ₹1 ಕೋಟಿ ಖರ್ಚಾಗಿದೆ. ಗರ್ಭಗುಡಿ 12X12 ವಿಸ್ತೀರ್ಣ ಇದೆ. ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳು ಇವೆ. ಚಾವಣಿ, ನೆಲಹಾಸು, ಅಲಂಕಾರ ಕಾಮಗಾರಿಗಳು ಬಾಕಿ ಇದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ದೇಗುಲಕ್ಕೆ ಸಾಗುವ ಹಾದಿ ಹದಗೆಟ್ಟಿದೆ. ರಸ್ತೆ ನಿರ್ಮಾಣಕ್ಕೆ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಈವರೆಗೆ ಕಾಮಗಾರಿಗೆ ಕ್ರಮ ವಹಿಸಿಲ್ಲ ಎಂದರು. 2021 ಡಿಸೆಂಬರ್ 2ರಂದು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. 2023ರ ನವರಾತ್ರಿಗೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದ್ದೇವೆ ಎಂದರು.









0 Comments