ಚಿಕ್ಕಮಗಳೂರು: 

ವಿಶೇಷ ಚೇತನರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ :

ವಿಶ್ವ ವಿಶೇಷ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಡಿ.3ರಂದು ವಿಶ್ವ ವಿಕಲಚೇತನರ ದಿನಾಚರಣೆ ನಡೆಯಲಿದ್ದು, 2022ನೇ ಸಾಲಿನಲ್ಲಿ ವಿಶೇಷ ಚೇತನರ ಪ್ರಶಸ್ತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಸಾಧಕ ಅಂಗವಿಕಲರು, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿರುವ ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಭ್ಯರ್ಥಿಗಳು ವಿಶೇಷ ಚೇತನರ ಕಚೇರಿಯಿಂದ ಅರ್ಜಿ ಪಡೆದು ಅ.25 ರೊಳಗೆ ಜಿಲ್ಲಾ ವಿಕಲಚೇತನರ ಕಲ್ಯಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣಾಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08262-228171,233882 ಸಂಪರ್ಕಿಸಬಹುದು. ಅರ್ಹರು ಈ ಅವಕಾಶದ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳಸ:  ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ 

ಮಲೆನಾಡು ಭಾಗದ ಕೃಷಿಕರ ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿಯಲ್ಲಿ ಕೃಷಿಕರ ಪರವಾಗಿ ಪೂಜೆ, ಪಾರಾಯಣ, ಹೋಮ ನಡೆಸಲಾಗುತ್ತದೆ ಎಂದು ದೇವಾಲಯದ ಮುಖ್ಯಸ್ಥ ಜಿ.ಭೀಮೇಶ್ವರ ಜೋಷಿ ತಿಳಿಸಿದರು. ಕಳಸ ಸೇರಿದಂತೆ ಸುತ್ತಮುತ್ತಲಿನ ಭಾಗದ ಎಲ್ಲಾ ಕೃಷಿಕರು ದೇವಸ್ಥಾನಕ್ಕೆ ಬಂದು ಅನಪೂರ್ಣೇಶ್ವರಿ ದೇವಿಯ ದರ್ಶನ ಪಡೆದು ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ತಮ್ಮ ಜಮೀನಿಗೆ ಸಿಂಪಡಿಸಬೇಕು. ಈ ಹಿಂದೆಯೂ ಜಗನ್ಮಾತೆಯ ಭಂಡಾರದ ಪ್ರಸಾದವನ್ನು ಕೃಷಿ ಭೂಮಿಗೆ ಹಾಕಿದ್ದರ ಪರಿಣಾಮ ಅನೇಕ ಸಮಸ್ಯೆಗಳು ಪರಿಹಾರ ಆಗಿರುವ ನಿದರ್ಶನಗಳೂ ಇದೆ ಎಂದರು. ಮಹಾತಾಯಿ ಅನ್ನಪೂರ್ಣೆಯ ಅನುಗ್ರಹದಿಂದ ಕೃಷಿಕರಿಗೆ ಬಂದಿರುವ ಗಂಡಾಂತರ ಪರಿಹಾರ ಆಗುವ ಎಲ್ಲ ಭರವಸೆ ಇದೆ. ಈ ರೋಗದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಬೇಕು ಮತ್ತು ನಿವಾರಣೆಯ ಮಾರ್ಗವನ್ನು ಕಂಡು ಹಿಡಿಯಬೇಕು ಎಂದು ಮುಖ್ಯಮಂತ್ರಿ, ಕೃಷಿ ಮಂತ್ರಿ ಮತ್ತು ಶಾಸಕರಲ್ಲಿ ಮನವಿ ಮಾಡಿದ್ದೇವೆ. ಈ ಕುರಿತು ಅಗತ್ಯವಾಗಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಭಾರೀ ಮಳೆಗೆ ಮನೆಗಳ ಗೋಡೆ ಕುಸಿತ 

ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೊನ್ನೇನಹಳ್ಳಿಯಲ್ಲಿ ಶನಿವಾರ ರಾತ್ರಿ ಧಾರಾಕಾರವಾಗಿ ಸುರಿದ ಭಾರೀ ಮಳೆಗೆ 5 ಮನೆಗಳು ಹಾನಿಗೊಂಡಿವೆ. ಹಾಲಪ್ಪ ಎಂಬುವವರ ಮನೆಯ ಒಂದು ಪಾರ್ಶ್ವ ಬಿದ್ದಿದ್ದರೆ, ಈರಮ್ಮ, ಮರುಳಪ್ಪ, ಮಲ್ಲಿಕಾರ್ಜುನ, ರೇವಣ್ಣ ಎಂಬುವವರ ಮನೆಗಳು ಬಿರುಕುಬಿಟ್ಟಿವೆ. ಮನೆಯೊಳಗಿದ್ದ ವಸ್ತುಗಳು ಮಣ್ಣಿನಲ್ಲಿ ಹೂತುಹೋಗಿವೆ. ಬೀರೂರು, ಕಡೂರು ಕಸಬಾ ಹೋಬಳಿ, ಸಿಂಗಟಗೆರೆ, ಯಗಟಿ, ಪಂಚನಹಳ್ಳಿ ಹೋಬಳಿಗಳಲ್ಲಿ ಶನಿವಾರ ಮಧ್ಯರಾತ್ರಿ ಬಿರುಸಿನ ಮಳೆಯಾಗಿದೆ. ಅಧಿಕಾರಿಗಳು ಅತೀ ಶೀಘ್ರವಾಗಿ ಸೂಕ್ತವಾದ ಪರಿಹಾರವನ್ನು ಒದಗಿಸಬೇಕೆಂದು ಕುಟುಂಬಸ್ಥರು ಕೋರಿದ್ದಾರೆ.

ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ:

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆ ಸೋಮವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಬಾರಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಇಂದೂ ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಈ ಮಳೆ ಇನ್ನೆರಡು ದಿನಗಳ ಕಾಲ ಸುರಿಯಲಿದೆ

ಹಾಸನ: 

ಭೀಕರ ಅಪಘಾತದಲ್ಲಿ ಸಾವಿಗೀಡಾದ 9 ಮಂದಿ ಕುಟುಂಬಕ್ಕೆ ಪರಿಹಾರ ಘೋಷಣೆ

ಹಾಸನದ ಅರಸೀಕೆರೆ ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾದ ಒಂಬತ್ತು ಜನರ ಕುಟುಂಬಕ್ಕೆ ತಲಾ ₹ 2 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.  

ಅಪಘಾತದಲ್ಲಿ ಗಂಭೀರ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶನಿವಾರ ಮಧ್ಯರಾತ್ರಿಯ ವೇಳೆ ಅರಸೀಕೆರೆ ತಾಲುಕಿನ ಬಾಣಾವರ ಬಳಿ ಶಿವಮೊಗ್ಗ-ಬೆಂಗಳೂರು ಮಾರ್ಗದ ರಸ್ತೆಯಲ್ಲಿ ಬಸ್, ಹಾಲಿನ ಟ್ಯಾಂಕರ್ ಮತ್ತು ಟೆಂಪೊ ಟ್ರಾವೆಲರ್ ನಡುವೆ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಟೆಂಪೊ ಟ್ರಾವೆಲರ್ನಲ್ಲಿ ಪ್ರಯಾಣಿಸುತ್ತಿದ್ದ 14 ಜನರ ಪೈಕಿ 9 ಜನರು ಮೃತಪಟ್ಟಿದ್ದಾರೆ. ಉಳಿದ ಐವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಸ್ ಚಾಲಕ ಸೇರಿದಂತೆ ಬಸ್ಸಿನಲ್ಲಿದ್ದ ಐವರಿಗೆ ಗಾಯಗಳಾಗಿವೆ. ಹಾಲಿನ ಟ್ಯಾಂಕರ್ ಚಾಲಕ ಡೈವರ್ಷನ್ ಫಲಕವನ್ನು ಗಮನಿಸಿದೇ, ತಪ್ಪು ದಾರಿಯಲ್ಲಿ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಶಿವಮೊಗ್ಗ: 

ಅಕ್ರಮ ಕ್ಯಾಂಪ್ ಗಳನ್ನು ನೆಲಕ್ಕುರುಳಿಸಿದ ಅಧಿಕಾರಿಗಳು :

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಹಕ್ಕಿಪಿಕ್ಕಿ ಜನರ ಕ್ಯಾಂಪ್ ಗಳ ತೆರವು ಕಾರ್ಯಾಚರಣೆಯನ್ನು ಇಂದು ಅಧಿಕಾರಿಗಳು ನಡೆಸಿದರು. ಶಿವಮೊಗ್ಗ ಜಿಲ್ಲೆಯ ಮಲ್ಲಿಗೆನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕ್ಯಾಂಪನ್ನು ಪೊಲೀಸರ ಸಹಾಯದಿಂದ ಅಧಿಕಾರಿಗಳು ತೆರವುಗೊಳಿಸಿದರು.ಮಲ್ಲಿಗೆನಹಳ್ಳಿಯಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಸೇರಿದ್ದ ಜಾಗದಲ್ಲಿ ಹಕ್ಕಿಪಿಕ್ಕಿ ಜನರು ಅನಧಿಕೃತವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಹೀಗಾಗಿ ಇಂದು ಪೊಲೀಸ್ ಬಂದೋಬಸ್ತ್ ನಲ್ಲಿ ಬಂದ ನೀರಾವರಿ ನಿಗಮದ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದರು.ಅಧಿಕಾರಿಗಳು ಜೆಸಿಬಿ ಮೂಲಕ ಮನೆ, ಕಾಪೌಂಡ್ ಕೆಡವುತ್ತಿದ್ದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಕಾರ್ಯಾಚರಣೆಗೆ ನಿವಾಸಿಗಳು ವಿರೋಧ ಮಾಡಿದರು. ಈ ವೇಳೆ ಅಡ್ಡಿಪಡಿಸಿದವರನ್ನು ಬಂಧಿಸಿದ ಪೊಲೀಸರು, ಕರೆದೊಯ್ದರು.

ಎಟಿಎಂ ಗಳಲ್ಲಿ ವಂಚನೆ ನಡೆಸುತ್ತಿದ್ದ ಖದೀಮನ ಬಂಧನ : 

ಎಟಿಎಂಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆದು ಹಣ ಡ್ರಾ ಮಾಡಿ ನಯವಾಗಿ ವಂಚನೆ ಮಾಡುತ್ತಿದ್ದ ಅಂತರ್ ಜಿಲ್ಲಾ ವಂಚಕನನ್ನು ಪೊಲೀಸರು ಬಂಧಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ವಿವಿಧ ಬ್ಯಾಂಕ್ ಗಳ ಎಟಿಎಂ ಕಾರ್ಡ್ ನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಹುಡ್ಕೋ ಕಾಲೋನಿಯ ನಿವಾಸಿ ಎನ್.ಸಾಗರ್ ಬಿನ್ ಜೆ. ನಾರಾಯಣಮೂರ್ತಿ (29) ಬಂಧಿತ ಆರೋಪಿ. ಸಾರ್ವಜನಿಕರಿಂದ ಖಚಿತ ಮಾಹಿತಿ ಮೇರೆಗೆ ನಾಯನಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆರೋಪಿಯು ಶಿವಮೊಗ್ಗ, ಯಾದಗಿರಿ, ಕೆ.ಆರ್. ನಗರ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಕೇಂದ್ರಗಳ ಬಳಿ ಸಾರ್ವಜನಿಕರ ಗಮನವನ್ನು ಬೇರೆಕಡೆ ಸೆಳೆದು ಅವರ ಎಟಿಎಂ ಕಾರ್ಡ್‍ಗಳನ್ನು ಮೋಸದಿಂದ ಪಡೆದುಕೊಂಡು ಹಣ ಡ್ರಾ ಮಾಡಿಕೊಂಡಿರುವ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುತ್ತದೆ ಎಂಬ ಮಾಹಿತಿ ಒದಗಿದೆ. ಆರೋಪಿಯಿಂದ 1 ಲಕ್ಷ 45 ಸಾವಿರ ನಗದು ಹಾಗೂ ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಬ್ಯಾಂಕ್‍ಗಳ ಎಟಿಎಂ ಕಾರ್ಡ್‍ಗಳನ್ನು ವಶಪಡಿಸಲಾಗಿದೆ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್‍ಪಿ ವಿ.ಕೆ. ವಾಸುದೇವ್ ಹಾಗೂ ಸಿಪಿಐ ರಾಜು ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಕೆ.ಪ್ರದೀಪ್ ಪೂಜಾರಿ ಅವರ ನೇತೃತ್ವದಲ್ಲಿ ಮತ್ತು ಸಿಬ್ಬಂದಿಯರಾದರಾಜೇಶ್,ರವಿಕುಮಾರ್,ವಿ.ಮುರಳಿ,ವಿಜಯಕುಮಾರ್ ಆರೋಪಿಯನ್ನು ಬಂಧಿಸಿದ್ದಾರೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಅವರು ಶ್ಲಾಘನೆ ಮಾಡಿದ್ದಾರೆ.