ಕೃಷಿ ಕಾರ್ಯವನ್ನು ನಡೆಸುತ್ತಾ ಜೀವನ ಸಾಗಿಸುತ್ತಿರುವ ರೈತರನ್ನು, ಕೃಷಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ಕಡೆಗಾಣಿಸುತ್ತಿದೆ ಅಲ್ಲದೇ ಹವಾಮಾನ ವೈಪರೀತ್ಯದಿಂದ ಕೃಷಿಕರು ಎದುರಿಸುತ್ತಿರುವ ಸಮಸ್ಯೆ ಕೇಂದ್ರಕ್ಕೆ ಕಾಣಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ಇನ್ನಿಲ್ಲದಷ್ಟು ಕಡೆಗಣಿಸುತ್ತಿದೆ ಎನ್ನುವುದಕ್ಕೆ ಈಗ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳೇ ಸಾಕ್ಷಿ. ಹವಾಮಾನ ವೈಪರಿತ್ಯ ಹಾಗೂ ಎಲೆಚುಕ್ಕಿ ರೋಗದಿಂದ ಅಡಿಕೆ ಕೃಷಿಕರ ಬವಣೆ ಹೇಳತೀರದಾಗಿದೆ. ಈ ಮಧ್ಯೆ ಕರಾವಳಿ, ಮಲೆನಾಡು, ಹಾಸನ, ಕೊಡಗು ಸೇರಿ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಜಗತ್ತಿನಲ್ಲಿ ಅತಿಹೆಚ್ಚು ಅಡಿಕೆ ಬೆಳೆಯುವ ಭಾರತದಲ್ಲಿ ಹೆಚ್ಚು ಫಸಲು ಬರುವುದೇ ನಮ್ಮ ರಾಜ್ಯದಲ್ಲಿ. ಆದರೆ, ಈ ಬೆಳೆ ತೆಗೆಯುವ ರಾಜ್ಯದ ರೈತರ ಬದುಕು ಕತ್ತಲೆಯಲ್ಲಿದೆ. ಇದಕ್ಕೆ ಸರ್ಕಾರ ಯಾವುದೇ ಸೂಕ್ತವಾದ ಪರಿಹಾರ ಹಾಗೂ ರೈತರಿಗೆ ಅಗತ್ಯವಿರುವ ಯಾವುದೇ ಸೌಲಭ್ಯಗಳನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಲಿ ಒದಗಿಸದೇ ಇರುವುದು ಅತ್ಯಂತ ದುರಾದೃಷ್ಟಕರ ಎಂದರು.
ಅಡಿಕೆ ಬೆಳೆಯುವುದು ಎಂದರೆ ಕತ್ತಿಯ ಮೇಲಿನ ಸವಾರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅತಿವೃಷ್ಟಿ, ಅನಾವೃಷ್ಟಿ ಜತೆಗೆ, ನಿರಂತರ ರೋಗರುಜಿನಗಳು ಬಾಧಿಸುತ್ತ ರೈತರನ್ನು ಕಿತ್ತು ತಿನ್ನುತ್ತಿವೆ. ರಾಜ್ಯ ಸರಕಾರವು ಪರಿಣಾಮಕಾರಿ ಔಷಧಿ ಪತ್ತೆ ಹಚ್ಚಿ ಬೆಳೆಗಾರರಿಗೆ ಕಡಿಮೆ ದರದಲ್ಲಿ ಒದಗಿಸಬೇಕಿದೆ. ಬೆಳೆ ನಷ್ಟಕ್ಕೆ ಪರಿಹಾರವನ್ನು ಕೂಡ ಕೊಡಬೇಕು ಎಂಬುದಾಗಿ ಮಾತನಾಡಿದರು.
ಮೊದಲೇ ಸಂಕಷ್ಟದಲ್ಲಿರುವ ಅಡಿಕೆ ರೈತರ ಮೇಲೆ ಕೇಂದ್ರ ಸರಕಾರ ಹೊಸ ಭೂತವನ್ನು ಛೂ ಬಿಡುತ್ತಿದೆ. ನೆರೆ ದೇಶ ಭೂತಾನ್ ನಿಂದ 17,000 ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕ್ರಮ ನಮ್ಮ ಅಡಿಕೆ ಬೆಳೆಗಾರರ ಮೇಲೆ ಬರೆ ಎಳೆಯುವ ಹುನ್ನಾರವಷ್ಟೆ.
ಅಡಿಕೆ ಬೆಳೆಯುತ್ತಾ ಅಡಕತ್ತರಿಯಲ್ಲಿ ಸಿಲುಕಿರುವ ರೈತರ ಹಿತ ಕಾಯುವುದು ರಾಜ್ಯ ಸರಕಾರದ ಕರ್ತವ್ಯ. ಅವರ ಸಂಕಷ್ಟಕ್ಕೆ ಮಿಡಿಯುವುದು ಮಾತ್ರವಲ್ಲ, ಎಲ್ಲಾ ರೀತಿಯಲ್ಲೂ ನೆರವಿಗೆ ಧಾವಿಸಬೇಕು ಎಂಬುದಾಗಿ ಸರ್ಕಾರವನ್ನು ಒತ್ತಾಯಿಸಿದರು.
ತೋಟಗಳಿಗೆ ಬಾಧಿಸುತ್ತಿರುವ ಮಾರಕವಾದ ಎಲೆಚುಕ್ಕಿ ರೋಗ, ಹಳದಿ ಎಲೆರೋಗ, ಮುಂತಾದವುಗಳ ಕುರಿತು ಸೂಕ್ಷ್ಮವಾಗಿ ಪರಿಗಣಿಸಿ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನಾಲಯಗಳಿಗೆ ಹಣವನ್ನು ಬಿಡುಗಡೆಮಾಡಿ ರೋಗತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂಬುದಾಗಿ ಅವರು ಆಗ್ರಹಿಸಿದರು.








0 Comments